ADVERTISEMENT

ವಿಸ್ತರಣೆ ರದ್ದು: ಸಿ.ಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:40 IST
Last Updated 8 ಜನವರಿ 2012, 19:40 IST

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯ ವಿಸ್ತರಿಸುವ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಶಾಸಕರು ಜನರ ವಿರೋಧ ಇರುವುದನ್ನು ಗಮನಕ್ಕೆ ತಂದ ಮೇಲೆ ಕಳೆದ ಡಿಸೆಂಬರ್ 24ರಂದು ಉನ್ನತ ಮಟ್ಟದ ಸಭೆ ನಡೆಸಿ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೂಕಾಂಬಿಕಾ ವನ್ಯಜೀವಿಧಾಮ, ಸೋಮೇಶ್ವರ ವನ್ಯಜೀವಿಧಾಮ, ಕಾವೇರಿ ವನ್ಯಜೀವಿಧಾಮ ಮತ್ತು ದಾಂಡೇಲಿ ವನ್ಯಜೀವಿಧಾಮದಲ್ಲಿ ಸಂರಕ್ಷಿತ ಪ್ರದೇಶದ ಪುನರ್‌ವಿಂಗಡಣೆ ಯೋಜನೆ ಮುಂದುವರಿಯಲಿದೆ ಎಂದು ಹೇಳಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ಸಂರಕ್ಷಿತ ಪ್ರದೇಶಕ್ಕೆ ಹೆಚ್ಚುವರಿಯಾಗಿ 201.69 ಚ.ಕಿ.ಮೀ. ಪ್ರದೇಶವನ್ನು ಮತ್ತು ಭದ್ರಾ ಹುಲಿ ಸಂರಕ್ಷಿತಾ ಪ್ರದೇಶ 500.16 ಚ.ಕಿ.ಮೀ.ನೀಂದ 848.59 ಚ.ಕಿ.ಮೀ.ಗೆ ವಿಸ್ತರಿಸುವ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಮಲೆನಾಡು ಭಾಗದ ಜನರು ಯೋಜನೆ ವಿರುದ್ಧ ಧ್ವನಿ ಎತ್ತಿದ್ದರು. ಯೋಜನೆ ವಿರೋಧಿಸಿ ಇತ್ತೀಚೆಗಷ್ಟೇ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಬಳಿ ನಕ್ಸಲರು ಕರಪತ್ರ ಎಸೆದು ಹೋಗಿದ್ದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾಲುಸಂಕ, ರಸ್ತೆ, ಶಾಲೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಲೆನಾಡಿನಲ್ಲಿ ನಕ್ಸಲ್ ಸಮಸ್ಯೆಗೆ ಅಭಿವೃದ್ಧಿಯಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎನ್ನುವುದು ಮನವರಿಕೆ ಆಗಿದೆ. 15ರಿಂದ 20 ದಿನಗಳಲ್ಲಿ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ ಎಂದರು.

`ರಾಜಕೀಯ ಸ್ಟಂಟ್ ನನಗೂ ಮತ್ತು ನನ್ನ ಪಕ್ಷಕ್ಕೂ ಅಗತ್ಯವಿಲ್ಲ. ಗೊಂದಲದ ನಡುವೆಯೂ ಅಭಿವೃದ್ಧಿ ನಿರ್ಲಕ್ಷಿಸಿಲ್ಲ. ಕಳೆದ ಐದು ತಿಂಗಳ ಆಡಳಿತ ನೆಮ್ಮದಿ ನೀಡಿದೆ. ಜತೆಗೆ ವಿಧಾನಸಭೆ ಕಲಾಪವನ್ನು ಒಳ್ಳೆಯ ರೀತಿಯಲ್ಲಿ ನಡೆಸಿರುವುದು ಸಮಾಧಾನ ತಂದಿದೆ~ ಎಂದರು.

ಸಚಿವ ಎಂ.ಪಿ.ರೇಣುಕಾಚಾರ್ಯ`ಸದಾನಂದ ಗೌಡರನ್ನು ಸಿಎಂ ಮಾಡಿದ್ದೇ ಯಡಿಯೂರಪ್ಪ~ ಎಂದು ಹೇಳಿರುವ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದಾಗ `ಈವರೆಗೂ ಯಾರದೇ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡಿಲ್ಲ. ಮುಂದೆಯೂ ಪ್ರತಿಕ್ರಿಯಿಸುವುದಿಲ್ಲ. ಯಾರು ಏನು ಹೇಳಿಕೆ ನೀಡುತ್ತಾರೋ ಅವರೇ ಅದಕ್ಕೆ ಉತ್ತರಿಸಬೇಕು~ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.