ADVERTISEMENT

ವೃತ್ತಿ ವೈಷಮ್ಯ: ಸೈಕೊ ಪರಾರಿಗೆ ಸಹಕಾರಿ!

ಜೈಲಿನ ಕೆಳಹಂತದ ಸಿಬ್ಬಂದಿ ಪಾತ್ರದ ತನಿಖೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 20:00 IST
Last Updated 3 ಸೆಪ್ಟೆಂಬರ್ 2013, 20:00 IST
ಜೈಶಂಕರ್
ಜೈಶಂಕರ್   

ಬೆಂಗಳೂರು: `ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಕೆಳ ಹಂತದ ಸಿಬ್ಬಂದಿ ನಡುವೆ ವೃತ್ತಿ ವೈಷಮ್ಯವಿತ್ತು. ಮೇಲಿನ ಅಧಿಕಾರಿಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೈದಿ ಸೈಕೊ ಜೈಶಂಕರ್‌ನಿಗೆ ಪರಾರಿಯಾಗಲು ಕೆಳ ಹಂತದ ಸಿಬ್ಬಂದಿ  ಸಹಾಯ ಮಾಡಿದ್ದಾರೆ' ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಜೈಶಂಕರ್‌ನನ್ನು ಇರಿಸಿದ್ದ ಜೈಲಿನ ಆಸ್ಪತ್ರೆ ವಿಭಾಗದಲ್ಲಿನ ಇತರೆ ಕೈದಿಗಳ ವಿಚಾರಣೆಯಿಂದ ಈ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನು ಪ್ರಶ್ನಿಸಿದಾಗ, `ಘಟನೆ ಸಂಬಂಧ ಗುಪ್ತಚರ ಇಲಾಖೆ ಅಧಿಕಾರಿಗಳು ಸಹ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ವರದಿ ನೀಡಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ' ಎಂದರು.  ಜೈಶಂಕರ್ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

`ತಮಿಳುನಾಡು ಪೊಲೀಸರು ಅವನನ್ನು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಬಂಧಿಸಿದ್ದಾರೆ ಎಂಬ ವದಂತಿ ಇತ್ತು. ಆ ಬಗ್ಗೆ ತಮಿಳುನಾಡು ಪೊಲೀಸರಿಂದ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ' ಎಂದು ಜಾರ್ಜ್ ತಿಳಿಸಿದರು. `ಕೈದಿಯೊಬ್ಬ ಪರಾರಿಯಾಗಿರುವುದು ಗಂಭೀರ ಲೋಪ. ಈ ಪ್ರಕರಣದಲ್ಲಿ ಕೆಲ ಅಧಿಕಾರಿಗಳು ಸಹ ಶಾಮೀಲಾಗಿರುವ ಶಂಕೆ ಇದೆ. ಈಗಾಗಲೇ 11 ಮಂದಿಯನ್ನು ಅಮಾನತು ಮಾಡಲಾಗಿದೆ' ಎಂದು ಸಿ.ಎಂ.ಸಿದ್ದರಾಮಯ್ಯ ಹೇಳಿದ್ದಾರೆ.

ಕೈದಿಗಳನ್ನು ಪ್ರತ್ಯೇಕಿಸಲು ಗೋಡೆ: `ಶಿಕ್ಷೆಗೆ ಗುರಿಯಾದ ಮತ್ತು ವಿಚಾರಣಾಧೀನ ಕೈದಿಗಳ ವಿಭಾಗವನ್ನು ಪ್ರತ್ಯೇಕಿಸುವ ಉದ್ದೇಶದಿಂದ ಜೈಲಿನ ಆವರಣದಲ್ಲಿ ಮೂರ‌್ನಾಲ್ಕು ವರ್ಷಗಳ ಹಿಂದೆ ಗೋಡೆ ನಿರ್ಮಿಸಲಾಗಿತ್ತು. ಆ ಗೋಡೆಯನ್ನು ನೆಲಸಮಗೊಳಿಸಿದರೆ ಕಾರಾಗೃಹದ ಇತರೆ ಗೋಡೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಪರಿಣತರ ಸಲಹೆ ಪಡೆದು, ಇತರೆ ಗೋಡೆಗಳಿಗೆ ಹಾನಿಯಾಗದಂತೆ ಆ ಗೋಡೆಯನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ' ಎಂದು ಕಾರಾಗೃಹಗಳ ಇಲಾಖೆ ಎಡಿಜಿಪಿ ಕೆ.ವಿ.ಗಗನ್‌ದೀಪ್ `ಪ್ರಜಾವಾಣಿ'ಗೆ ತಿಳಿಸಿದರು.

ರಾಮನಗರ ವರದಿ: ಜೈಶಂಕರ್ ಬಿಡದಿ ಬಳಿ ಸಾರ್ವಜನಿಕರಿಗೆ ಕಂಡುಬಂದಿದ್ದ ಎಂಬ ವದಂತಿ ಮಂಗಳವಾರ ದಟ್ಟವಾಗಿ ಹಬ್ಬಿತ್ತು. ಬಿಡದಿಯಿಂದ ಬೈರಮಂಗಲಕ್ಕೆ ಹೋಗುವ ಮಾರ್ಗದ ಮದ್ಯದಂಗಡಿಯೊಂದರ ಬಳಿ ಜೈಶಂಕರ್‌ನಂತೆಯೇ ಇದ್ದ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ ಕುಂಟುತ್ತಾ ಹೋಗುತ್ತಿದ್ದ ಎಂದು ಸ್ಥಳೀಯರು ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದರು. ಹುಚ್ಚನಂತಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಈ ಭಾಗದಲ್ಲಿ ಓಡಾಡುತ್ತಿದ್ದ ಎಂದು ಮತ್ತೆ ಕೆಲವರು ಪೊಲೀಸರಿಗೆ ತಿಳಿಸಿದರು. ಈ ಮಾಹಿತಿ ಆಧರಿಸಿ ಬಿಡದಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಅಂತಹ ಯಾವುದೇ ವ್ಯಕ್ತಿ ಅಲ್ಲಿ ಕಂಡುಬಂದಿಲ್ಲ. ಅಲ್ಲದೇ, ಸ್ಥಳೀಯರು ತಾವು ನೋಡಿದ್ದ ವ್ಯಕ್ತಿ ಜೈಶಂಕರ್‌ನೋ ಅಥವಾ ಬೇರೆ ವ್ಯಕ್ತಿಯೋ ಎಂಬುದನ್ನು ಖಚಿತವಾಗಿ ಹೇಳುತ್ತಿಲ್ಲ. ಆದರೂ ಅಕ್ಕಪಕ್ಕದ ಗ್ರಾಮಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ತೆಗೆ ಇತರೆ ಜಿಲ್ಲೆಗಳ ಸಿಬ್ಬಂದಿ: ಈ ಹಿಂದೆ 2011ರ ಏಪ್ರಿಲ್‌ನಲ್ಲಿ ಜೈಶಂಕರ್‌ನನ್ನು ಬಂಧಿಸಿದ್ದ ಪೊಲೀಸ್ ತಂಡದಲ್ಲಿದ್ದ ಚಿತ್ರದುರ್ಗ, ತುಮಕೂರು ಮತ್ತು ವಿಜಾಪುರ ಜಿಲ್ಲೆಯ ಸಿಬ್ಬಂದಿಯನ್ನು ಇದೀಗ ಆತನ ಬಂಧನಕ್ಕೆ ರಚಿಸಿರುವ ವಿಶೇಷ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಹಿಂದಿನ ಪೊಲೀಸ್ ತಂಡದಲ್ಲಿದ್ದ ಶಿರಾ ವೃತ್ತದ ಇನ್‌ಸ್ಪೆಕ್ಟರ್ ಪಿ.ರವಿ, ಚಿತ್ರದುರ್ಗ ಬೆಸ್ಕಾಂ ಜಾಗೃತ ದಳದ ಇನ್‌ಸ್ಪೆಕ್ಟರ್ ನಾಗರಾಜ್, ಎಸ್‌ಐ ಬಾಲಚಂದ್ರ ನಾಯಕ್ ಹಾಗೂ ವಿಜಾಪುರದ ಝಳಕಿ ಚೆಕ್‌ಪೋಸ್ಟ್‌ನ ಎಸ್‌ಐ ರಾಜಶೇಖರ್ ಅವರನ್ನು ವಿಶೇಷ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆ ನಾಲ್ಕು ಮಂದಿ ಸಿಬ್ಬಂದಿ ಹಿರಿಯೂರು ಸಮೀಪದ ಮೇಟಿಕುರ್ಕೆ ಬಳಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಣೆ ನಡೆಸಿ, ಝಳಕಿಯಲ್ಲಿ ಜೈಶಂಕರ್‌ನನ್ನು ಬಂಧಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿದ್ರೆ ಮಾಡಿದ್ದರು
`ಜೈಶಂಕರ್‌ನನ್ನು ಇರಿಸಲಾಗಿದ್ದ ಆಸ್ಪತ್ರೆ ವಿಭಾಗದ ಬ್ಯಾರಕ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾವಲಿಗೆ ನೇಮಿಸಿದ್ದ ಆರು ಮಂದಿ ಸಿಬ್ಬಂದಿ ಘಟನಾ ಸಂದರ್ಭದಲ್ಲಿ ನಿದ್ರೆ ಮಾಡಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಆತ ಆ ಸಂದರ್ಭವನ್ನು ಬಳಸಿಕೊಂಡು ಆಸ್ಪತ್ರೆಯ ಬ್ಯಾರಕ್‌ನಿಂದ ಬಂದು ಗೋಡೆ ಏರಿ ತಪ್ಪಿಸಿಕೊಂಡಿದ್ದಾನೆ. ಕಾರಾಗೃಹದ  ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಘಟನಾ ದಿನ ದಾಖಲಾಗಿರುವ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT