ADVERTISEMENT

ವೃದ್ಧರಿಗೆ, ಅಂಗವಿಕಲರಿಗೆ ಮಾಸಾಶನ ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 20:00 IST
Last Updated 21 ಜೂನ್ 2011, 20:00 IST

ಬೆಂಗಳೂರು: `ಮಠಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಮನಬಂದಂತೆ ಹಣ ಬಿಡುಗಡೆ ಮಾಡುವ ರಾಜ್ಯ ಸರ್ಕಾರ, ಕಳೆದ ಆರು ತಿಂಗಳಿಂದ ವಿಧವೆಯರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಮಾಸಾಶನ ನೀಡಿಲ್ಲ.ಚಿಕಿತ್ಸೆಗೆ ಹಣವಿಲ್ಲದಿದ್ದರೆ ಬಡವರು ಬದುಕುವುದಾದರೂ ಹೇಗೆ~ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ತರಾಟೆಗೆ ತೆಗೆದುಕೊಂಡರು.

ಜನವರಿಯಿಂದ ಈಚೆಗೆ ವಿಧವೆಯರಿಗೆ, ವೃದ್ಧರಿಗೆ ತಿಂಗಳಿಗೆ ರೂ 400, ಅಂಗವಿಕಲರಿಗೆ ಒಂದು ಸಾವಿರ ರೂಪಾಯಿ ಮಾಸಾಶನ ನೀಡುವುದನ್ನು ನಿಲ್ಲಿಸಲಾಗಿದೆ. ಕೇಂದ್ರ ಇದಕ್ಕೆ ಶೇ 50ರಷ್ಟು ನೆರವು ನೀಡುತ್ತಿದೆ, ಆದರೆ ಈ ಹಣವನ್ನು ಸಹ ರಾಜ್ಯವು ನೀಡುತ್ತಿಲ್ಲ. ಕೂಡಲೇ ಮಾಸಾಶನ ನೀಡದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ವೃದ್ಧರು ಸರ್ಕಾರ ನೀಡುವ ಮಾಸಾಶನ ಮೇಲೆ ಅವಲಂಬನೆಯಾಗಿದ್ದಾರೆ. ಆರು ತಿಂಗಳಿಂದ ಹಣ ಪಾವತಿಯಾಗದ ಕಾರಣ ಔಷಧಿ ಕೊಳ್ಳಲು ಸಹ ತೊಂದರೆಯಾಗಿದೆ. ಅನರ್ಹರು ಇದ್ದರೆ ಅವರನ್ನು ಪಟ್ಟಿಯಿಂದ ಕೈಬಿಡಲು ಅಡ್ಡಿಯಿಲ್ಲ, ಆದರೆ ಅರ್ಹರಿಗೆ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಎರಡು ವರ್ಷಗಳಿಂದ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ನೀಡಿಲ್ಲ. ಅಲ್ಲದೆ ಈ ಯೋಜನೆಯ ಫಲಾನುಭವಿಗಳಾಗಲು ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಮಾಡಲಾಗಿದೆ. ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುತ್ತಿಲ್ಲ. ಮೊದಲಿನ ಹಾಗೆ ಆದಾಯ ಪ್ರಮಾಣ ಹೊಂದಿರುವ ಅರ್ಹರನ್ನು ನೋಂದಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಅವಾಂತರಗಳಿಂದಾಗಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ಈಗ ಕಾರ್ಡ್ ಇದ್ದವರು ಮಾತ್ರ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅರ್ಹರು ಎಂದರೆ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ. ಮೊದಲು ಅರ್ಹರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ನೀಡಬೇಕು. ಈಗಾಗಲೇ ಹೆಸರು ನೋಂದಾಯಿಸಿರುವ ಫಲಾನುಭವಿಗಳಿಗೆ ಬಾಂಡ್ ನೀಡಬೇಕು ಎಂದು ಆಗ್ರಹಿಸಿದರು.

ಭತ್ತ ಮತ್ತು ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆವರ್ತನಿಧಿಗೆ ರೂ 500 ಕೋಟಿ ನೀಡಿರುವುದಾಗಿ ಹೇಳಿದ್ದಾರೆ. ಹಾಗಾದರೆ ಬೆಂಬಲ ಬೆಲೆಯಲ್ಲಿ ಭತ್ತ, ರೇಷ್ಮೆಗೂಡು ಯಾಕೆ ಖರೀದಿ ಮಾಡಬಾರದು ಎಂದು ಪ್ರಶ್ನಿಸಿದರು. ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿಲ್ಲ. ಸರ್ಕಾರ ಕೇವಲ ಸುಳ್ಳು ಆಶ್ವಾಸನೆ ನೀಡುತ್ತಿದೆ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.