ADVERTISEMENT

ವೇತನ ಹೆಚ್ಚಳ: ಅಧಿಸೂಚನೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಬೆಂಗಳೂರು: ಅಧಿಕಾರಿಗಳ ವೇತನ ಸಮಿತಿ ವರದಿಯ ಶಿಫಾರಸಿನ ಪ್ರಕಾರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ   ಅಧಿಸೂಚನೆ ಹೊರಡಿಸಿದೆ.
 ವೇತನ ಪರಿಷ್ಕರಣೆ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿಗಳೊಂದಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಮೂಲವೇತನ, ಭತ್ಯೆಗಳ ನಿಗದಿ, ಬಡ್ತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವೇತನ ಸಮಿತಿ ನೀಡಿದ್ದ ವರದಿಯ ಬಹುತೇಕ ಶಿಫಾರಸುಗಳು ಅಧಿಸೂಚನೆಯಲ್ಲಿವೆ. ವೇತನ ಪರಿಷ್ಕರಣೆ ಅನುಷ್ಠಾನ ಕುರಿತ ವಿವರಗಳೂ ಆದೇಶದಲ್ಲಿವೆ.

25 ಸಾವಿರ ಮತ್ತು ಅದಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ಗ್ರಾಮೀಣ ಭತ್ಯೆ  ಕಡಿತ ಮಾಡಲಾಗಿದೆ. ಈವರೆಗೂ 100 ರೂಪಾಯಿ ಗ್ರಾಮೀಣ ಭತ್ಯೆ ನೀಡಲಾಗುತ್ತಿತ್ತು. ಪರಿಷ್ಕೃತ ವೇತನ ಶ್ರೇಣಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಈ ಭತ್ಯೆ ಕಡಿತ ಮಾಡಲಾಗಿದೆ.

ಹೆರಿಗೆ ರಜೆಯ ಅವಧಿ ಹೆಚ್ಚಳ ಸೇರಿದಂತೆ ಕೆಲ ವಿಷಯಗಳ ಬಗ್ಗೆ ಆದೇಶದಲ್ಲಿ ಪ್ರಸ್ತಾಪಿಸಿಲ್ಲ. ಬಾಕಿ ಉಳಿದಿರುವ ಎಲ್ಲ ವಿಚಾರಗಳ ಕುರಿತು ಪ್ರತ್ಯೇಕ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.