ADVERTISEMENT

ವೇದಿಕೆಯಲ್ಲೇ ಜಟಾಪಟಿ

ಬರದ ನಾಡಲ್ಲಿ ನುಡಿಹಬ್ಬ

ರಾಜೇಶ್ ರೈ ಚಟ್ಲ
Published 9 ಫೆಬ್ರುವರಿ 2013, 19:59 IST
Last Updated 9 ಫೆಬ್ರುವರಿ 2013, 19:59 IST
ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಪೊಲೀಸರು ತಡೆದಾಗ ರಾದ್ಧಾಂತ ಉಂಟಾಯಿತು.
ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಪೊಲೀಸರು ತಡೆದಾಗ ರಾದ್ಧಾಂತ ಉಂಟಾಯಿತು.   

ವಿಜಾಪುರ: ಸಾಹಿತ್ಯ ಸಮ್ಮೇಳನ ಮೊದಲ ದಿನದ ಅವ್ಯವಸ್ಥೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ನಿಕಟಪೂರ್ವ ಅಧ್ಯಕ್ಷ ನಲ್ಲೂರು ಪ್ರಸಾದ್, ಸಾಹಿತಿ, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಬಹುತೇಕ ಜಿಲ್ಲೆಗಳ ಅಧ್ಯಕ್ಷರು ಬಲಿಯಾದುದು ವಿಪರ್ಯಾಸ!

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗಮಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಮ್ಮೇಳನದ ಪ್ರಧಾನ ವೇದಿಕೆ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ವಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಸ್ಥಳದ ಉಸ್ತುವಾರಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಾಲಂಬಿ, ನಲ್ಲೂರು, ಬರಗೂರು ಮತ್ತಿತರರು ವೇದಿಕೆ ಏರಲು ಹೋಗಿದ್ದರು. ಅವರೆಲ್ಲರನ್ನು  ತಡೆದದ್ದು ಅಲ್ಲಿದ್ದವರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ನಲ್ಲೂರು ಅವರನ್ನು ತಕ್ಷಣ ಬಂಧಿಸುವಂತೆ ಪಕ್ಕದಲ್ಲಿದ್ದ ಪೊಲೀಸರಿಗೆ ಎಸ್.ಪಿ ಹಿಂದಿಯಲ್ಲಿ ಸೂಚನೆ ನೀಡಿದರು ಎನ್ನಲಾಗಿದ್ದು,  ಇದು ಭಾರಿ ರಾದ್ಧಾಂತಕ್ಕೆ ಕಾರಣವಾಯಿತು. ನಲ್ಲೂರು ಮತ್ತು ಎಸ್.ಪಿ ಮಧ್ಯೆ ತಳ್ಳಾಟವೂ ನಡೆಯಿತು. ನಲ್ಲೂರರ ಜೊತೆಗಿದ್ದವರು ಎಸ್.ಪಿ ಮೇಲೆ ಹರಿಹಾಯ್ದರು. ಸಮ್ಮೇಳನವನ್ನೇ ಬಹಿಷ್ಕರಿಸುವುದಾಗಿ ಬೆದರಿಕೆ ಒಡ್ಡಿದ ಪ್ರಸಂಗವೂ ನಡೆಯಿತು.

ಬ್ಯಾಡ್ಜ್ ಹೊಂದಿಲ್ಲ ಎಂಬ ಕಾರಣಕ್ಕೆ ಪುಂಡಲೀಕ ಹಾಲಂಬಿ ಅವರನ್ನು ವೇದಿಕೆ ಹತ್ತಲು ಬಿಟ್ಟಿರಲಿಲ್ಲ. ಇದೂ ಮತ್ತಷ್ಟು ರಾದ್ಧಾಂತಕ್ಕೆ ಕಾರಣವಾಗಿ  ಪ್ರಧಾನ ವೇದಿಕೆ ಕೆಲ ಹೊತ್ತು ಪೊಲೀಸರು ಮತ್ತು `ಗಣ್ಯರ' ನಡುವಿನ ವಾಗ್ವಾದಕ್ಕೆ ಸಾಕ್ಷಿಯಾಯಿತು.

ತಪ್ಪಿನ ಅರಿವಾಗಿ ನಂತರ ವೇದಿಕೆಗೆ ಬಂದ ಎಸ್.ಪಿ ಹಿಲೋರಿ, ಹಾಲಂಬಿ ಮತ್ತು ನಲ್ಲೂರರ ಬಳಿಗೆ ತೆರಳಿ ಕ್ಷಮೆ ಯಾಚಿಸಿದರು.

`ಪ್ರಜಾವಾಣಿ' ಜೊತೆ ಈ ಬಗ್ಗೆ ಮಾತನಾಡಿದ ಬರಗೂರು, `ವೇದಿಕೆಯ ಬಳಿಗೆ ಮುಖ್ಯಮಂತ್ರಿ ಬರುತ್ತಾರೆ ಎಂದು ಪೊಲೀಸರು ಎಲ್ಲರನ್ನೂ ತಡೆದರು, ನಾನು ಅತಿಥಿ ಎಂದು ವಿನಂತಿಸಿಕೊಂಡರೂ ಕೇಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ನನ್ನನ್ನೇ ಏಕೆ, ಕನ್ನಡ ಸಾಹಿತ್ಯ ಪರಿಷತ್ತಿನ  ನಿಕಟಪೂರ್ವ ಅಧ್ಯಕ್ಷ ನಲ್ಲೂರು ಪ್ರಸಾದ ಅವರನ್ನೂ ಪೊಲೀಸರು ನೂಕಿದರು. ಹೀಗಾಗಿ ಅಲ್ಲಿ ದೊಡ್ಡ  ಗೊಂದಲ ನಡೆದುಹೋಯಿತು. ಪುಂಡಲೀಕ ಹಾಲಂಬಿ ಸ್ಥಿತಿಯೂ ಇದೇ ಆಯಿತು. ಮುಖ ನೋಡಿ ಅತಿಥಿಗಳನ್ನು ವೇದಿಕೆಯ ಬಳಿಗೆ ಕರೆದುಕೊಂಡು ಹೋಗಲು ಅಲ್ಲಿ ಯಾರೂ ಇಲ್ಲದ್ದರಿಂದ ಈ ಸಮಸ್ಯೆಗೆ ಕಾರಣವಾಯಿತು' ಎಂದರು.

`ಅಂತೂ ನೂಕುನುಗ್ಗಲಿನ ಮಧ್ಯೆ ವೇದಿಕೆ ಏರಿ ಪ್ಯಾಂಟ್ ಪಾಕೆಟ್ ನೋಡಿದರೆ ಹಿಂದಿನ ಪಾಕೆಟ್‌ನಲ್ಲಿಟ್ಟಿದ್ದ ಸುಮಾರು 9,500 ರೂಪಾಯಿ ನಾಪತ್ತೆ ಆಗಿತ್ತು. ಶುಕ್ರವಾರ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಶನಿವಾರ ಬೆಳಿಗ್ಗೆ ಹುಬ್ಬಳ್ಳಿಗೆ ಬಂದು ಅಲ್ಲಿಂದ ಇಲ್ಲಿಗೆ ಬಂದಿದ್ದೆ. ಕಾರ್ಯಕ್ರಮವೊಂದಕ್ಕೆ ವೆಚ್ಚ ಮಾಡಲು ಇಟ್ಟುಕೊಂಡ ಹಣ ಅದಾಗಿತ್ತು' ಎಂದು ಅಳಲು ತೋಡಿಕೊಂಡರು.

`ಮೊದಲ ದಿನ ಅವ್ಯವಸ್ಥೆಗಳಾಗುವುದು ಸಾಮಾನ್ಯ. ಸಾವಿರಾರು ಜನ ಸೇರುವ ಜನಜಾತ್ರೆಗಳ ಸಂದರ್ಭಗಳಲ್ಲಿ ಈ ರೀತಿ ಆಗುವುದು ಸಹಜ. ಆದರೆ ಎರಡನೇ ದಿನಕ್ಕೂ ಈ ಸ್ಥಿತಿ ಮುಂದುವರಿಯಬಾರದು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಬರುತ್ತಾರೆ ಎನ್ನುವ ಕಾರಣಕ್ಕೆ ಅತಿಥಿಗಳಿಗೆ ಈ ಅವಸ್ಥೆ ಬರಬಾರದು. ಅಸ್ಸಾಂ ಸಾಹಿತ್ಯ ಸಮ್ಮೇಳನಕ್ಕೆ ಮೊನ್ನೆಯಷ್ಟೇ ಹೋಗಿ ಬಂದೆ. ಅಲ್ಲಿ ಅತಿಥಿಗಳನ್ನು ನೋಡಿಕೊಳ್ಳಲು ಒಬ್ಬೊಬ್ಬರನ್ನು ನಿಯೋಜಿಸಲಾಗಿತ್ತು. 50 ಮಂದಿ ಅತಿಥಿಗಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಹೇಗೆ' ಎಂದೂ ಅವರು ಪ್ರಶ್ನಿಸಿದರು.

`ಸರ್ಕಾರದ ವೈಭವೀಕರಣ ಸಲ್ಲ'
`ಸಾಹಿತ್ಯ ಸಮ್ಮೇಳನದ ವೇದಿಕೆಗಳು ಪಕ್ಷದ, ಸರ್ಕಾರದ ವೈಭವೀಕರಣಕ್ಕೆ ವೇದಿಕೆ ಆಗಬಾರದು' ಎಂದು ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿಯವರ ಉದ್ಘಾಟನಾ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, `ಸಾಹಿತ್ಯ, ಸಂಸ್ಕೃತಿಗೆ ಸರ್ಕಾರ ಏನು ಮಾಡಿದೆ ಎನ್ನುವುದನ್ನು ಇಂತಹ ವೇದಿಕೆಗಳಲ್ಲಿ ಹೇಳಬೇಕೇ ಹೊರತು, ಸರ್ಕಾರದ ಸಾಧನೆ, ಮುಂಬರುವ ಚುನಾವಣೆಯ ಪ್ರಣಾಳಿಕೆ ಓದುವುದು ಸರಿಯಲ್ಲ' ಎಂದು ಕಿಡಿ ಕಾರಿದರು.

`ಕಾರ್ಯಕ್ರಮ ಪಟ್ಟಿ ಪ್ರಕಾರ ನಾನು ಮೂರನೆಯವನಾಗಿ ಭಾಷಣ ಮಾಡಬೇಕಿತ್ತು. ಆದರೆ ನನಗೆ ಕೊನೆಯದಾಗಿ ಅವಕಾಶ ಸಿಕ್ಕಿತ್ತು. ಪಟ್ಟಿ ಪ್ರಕಾರ ಅವಕಾಶ ಸಿಗಲು ನಾನೇನೂ ರಾಜಕಾರಣಿಯಲ್ಲವಲ್ಲ ಅಥವಾ ಹೆಲಿಕಾಪ್ಟರ್‌ನಲ್ಲಿ ಹೋಗುವವನಲ್ಲ' ಎಂದೂ ಅವರು ಚುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.