ADVERTISEMENT

ವೈಫಲ್ಯ ಮರೆಮಾಚಲು ಸರ್ಕಾರ ಯತ್ನ: ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಪ್ರಮೋದ್ ಮುತಾಲಿಕ್‌
ಪ್ರಮೋದ್ ಮುತಾಲಿಕ್‌   

ಉಡುಪಿ: ‘ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಹಿಡಿದು ಗೌರಿ ಹಂತಕನೆಂದು ಬಿಂಬಿಸಲಾಗುತ್ತಿದೆ. ಇದು ಚುನಾವಣೆ ವೇಳೆ ಜನರನ್ನು ಮೂರ್ಖರನ್ನಾಗಿಸುವ ತಂತ್ರ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಟೀಕಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೌರಿ ಲಂಕೇಶ್‌, ಎಂ.ಎಂ.ಕಲಬುರ್ಗಿ ಹಂತಕರನ್ನು ಸರ್ಕಾರಕ್ಕೆ ಇಲ್ಲಿಯವರೆಗೂ ಹಿಡಿಯಲು ಸಾಧ್ಯವಾಗಿಲ್ಲ. ಬಂಧಿತನು ನನ್ನ ಪರಿಚಯದ ಹಿಂದೂ ಸಂಘಟನೆ ಕಾರ್ಯಕರ್ತನಾಗಿದ್ದಾನೆ. ಆತ ಕೊಲೆ ಮಾಡುವಂತಹ ವ್ಯಕ್ತಿಯಲ್ಲ. ಪಿಸ್ತೂಲು ಸಿಕ್ಕಿದ ಮಾತ್ರಕ್ಕೆ ಆತ ಕೊಲೆ ಮಾಡಲು ಹೇಗೆ ಸಾಧ್ಯ? ತನ್ನ ವೈಫಲ್ಯ ಮರೆಮಾಚಲು ಸರ್ಕಾರ ಈ ರೀತಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

‘ಕಾಂಗ್ರೆಸ್ ಮತ್ತು ಬಿಜೆಪಿ ಹಿಂದುತ್ವವನ್ನು ಸವಾರಿ ಮಾಡುವ ಮೂಲಕ ಅಧಿಕಾರ ಪಡೆದುಕೊಳ್ಳುವ ಇಂಗಿತ ಹೊಂದಿವೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಗೋಹತ್ಯೆ ನಿಷೇಧ ಮಾಡಿಲ್ಲ. ಇದು ಯಾವ ರೀತಿಯ ಹಿಂದುತ್ವ ಎಂದು ಪ್ರಶ್ನಿಸಿದರು. ಹಿಂದುತ್ವದ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ 7 ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಹಿಂದೂ ಕಾರ್ಯಕರ್ತರು ಸತ್ತಾಗ ಮಾತ್ರ ಕಣ್ಣೀರು ಸುರಿಸುತ್ತಾರೆ, ಕೋರ್ಟ್‌, ಕಚೇರಿಗೆ ಅಲೆದಾಡುವ ಕಾರ್ಯಕರ್ತರ ಬಗ್ಗೆ ಯಾರೂ ಸಹ ಮಾತಾಡುವುದಿಲ್ಲ, ಸಹಕಾರ ನೀಡುವುದಿಲ್ಲ’ ಎಂದು ಬಿಜೆಪಿಯನ್ನು ದೂರಿದರು.

ADVERTISEMENT

ಬಾಗಿಲು ಮುಚ್ಚಿದೆ: ‘ಶ್ರೀರಾಮ ಸೇನೆ, ಶಿವಸೇನೆ ಸ್ಪರ್ಧೆಯಿಂದ ಹಿಂದುತ್ವದ ಮತ ಬ್ಯಾಂಕ್ ವಿಭಜನೆಯಾಗುತ್ತದೆ ನಿಜ. ಅದಕ್ಕೆ ನೇರ ಕಾರಣ ಬಿಜೆಪಿ. ಅವರೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಅವರಿಗೆ ಶ್ರೀರಾಮಸೇನೆಯ ಬಾಗಿಲು ಮುಚ್ಚಿ, ನಾವು ಸಾಕಷ್ಟು ಮುಂದೆ ಬಂದಾಗಿದೆ’ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.