ADVERTISEMENT

ವ್ಯಾಪಾರ ಮಾಡಿ ಹಣ ಗಳಿಸಿದ ಮಕ್ಕಳು

ಮೈಸೂರು ರಂಗಾಯಣದ ಆವರಣದಲ್ಲಿ ಚಿಣ್ಣರ ಸಂತೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:51 IST
Last Updated 10 ಮೇ 2018, 19:51 IST
ಚಿಣ್ಣರ ಸಂತೆಯಲ್ಲಿ ತಿಂಡಿ–ತಿನಿಸು ಮಾರಾಟ ಮಾಡಿದ ಮಕ್ಕಳು
ಚಿಣ್ಣರ ಸಂತೆಯಲ್ಲಿ ತಿಂಡಿ–ತಿನಿಸು ಮಾರಾಟ ಮಾಡಿದ ಮಕ್ಕಳು   

ಮೈಸೂರು: ಅಂಕಲ್‌ ಜ್ಯೂಸ್‌ ತೆಗೆದುಕೊಳ್ಳಿ... ಆಂಟಿ ತರಕಾರಿ ಬೇಕಾ...? ಒಂದು ಮಾವಿನ ಹಣ್ಣು ಕೊಂಡರೆ ಮತ್ತೊಂದು ಫ್ರೀ... ಸೊಗದೆ ಬೇರು, ಬಾಳೆದಿಂಡು ರಸ ಕುಡಿಯಿರಿ, ಆರೋಗ್ಯವಾಗಿರಿ...

ರಂಗಾಯಣದ ಆವರಣದಲ್ಲಿ ಗುರು ವಾರ ಏರ್ಪಡಿಸಿದ್ದ ‘ಚಿಣ್ಣರ ಸಂತೆ’ಯಲ್ಲಿ ಮಕ್ಕಳು ಮಾರಾಟದಲ್ಲಿ ತೊಡಗಿದ್ದ ಪರಿಯಿದು. ಸಂತೆ ತುಂಬೆಲ್ಲಾ ಮಕ್ಕಳದ್ದೇ ಕಲರವ. ತರಕಾರಿ, ಸೊಪ್ಪು, ಹಣ್ಣು, ಕುರುಕುಲು ತಿಂಡಿ ವಿವಿಧ ಹಣ್ಣಿನ ರಸ, ರಾಗಿ ಹಿಟ್ಟು, ಚಾಕೋಲೆಟ್‌, ಬಿಸ್ಕತ್ತು... ಹೀಗೆ ತರಹೇವಾರಿ ತಿಂಡಿ–ತಿನಿಸುಗಳ ಮಾರಾಟ ಜೋರಾಗಿತ್ತು. ಮಕ್ಕಳು ತಯಾರಿಸಿದ ಚಿತ್ರಕಲಾಕೃತಿಗಳ ಮಾರಾಟವೂ ಇತ್ತು.

ಬಹುತೇಕರು ತಿಂಡಿಯನ್ನು ಅಂಗಡಿಗಳಿಂದ ಖರೀದಿಸಿ ತಂದಿದ್ದರು. ಮನೆಯಲ್ಲೇ ತಯಾರಿಸಿದ್ದ ತಿಂಡಿಯನ್ನು ಕೆಲ ಮಕ್ಕಳು ತಂದಿದ್ದರು. ಸಂತೆಗೆ ಬರುತ್ತಿದ್ದ ಪ್ರತಿಯೊಬ್ಬರ ಬೆನ್ನು ಬೀಳುತ್ತಿದ್ದ ಮಕ್ಕಳು, ಖರೀದಿಸುವಂತೆ ಮನವಿ ಮಾಡುತ್ತಿದ್ದರು. ‘ಅರ್ಧ ಬೆಲೆಗೆ ಕೊಡುತ್ತೇನೆ. ತೆಗೆದುಕೊಳ್ಳಿ... ಪ್ಲೀಸ್‌...’ ಎಂದೂ ವಿನಂತಿಸುತ್ತಿದ್ದರು. ಮಕ್ಕಳಿಗೆ ಬೆಂಬಲವಾಗಿ ಪೋಷಕರು ನಿಂತಿದ್ದರು.

ADVERTISEMENT

ರಾಮಕೃಷ್ಣನಗರದ ಮಧು ಪ್ರಭುಸ್ವಾಮಿಗೌಡ 7ನೇ ತರಗತಿ ವಿದ್ಯಾರ್ಥಿ. ಸೊಗದೆ ಬೇರು, ಬಾಳೆ ದಿಂಡಿನ ರಸ ಮಾರಾಟ ಮಾಡುತ್ತಿದ್ದ. ‘ಒಂದು ಲೋಟ ರಸದ ಬೆಲೆ ₹10. ರಸ ಕುಡಿಯಿರಿ, ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಫಲಕವನ್ನು ಪ್ರದರ್ಶಿಸುತ್ತಾ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ.

‘ಇದೇ ಮೊದಲ ಬಾರಿಗೆ ಸಂತೆಯಲ್ಲಿ ಪಾಲ್ಗೊಂಡಿದ್ದೇನೆ. ಜೀವನದಲ್ಲಿ ಕಷ್ಟ ಬಂದರೂ ಧೈರ್ಯವಾಗಿ ಎದುರಿಸ ಬೇಕು. ಸಂಕೋ ಚ ಪಡಬಾರದು ಎಂಬುದನ್ನು ಕಲಿಸುವು ದಕ್ಕಾಗಿ ಈ ಸಂತೆ ಮಾಡಿದ್ದಾರೆ. ಜನರ ಜತೆ ಹೇಗೆ ಮಾತನಾಡಬೇಕು ಎಂದು ಈಗ ಗೊತ್ತಾಗುತ್ತಿದೆ’ ಎಂದು ಮಧು ಹೇಳಿದ.

₹5ಕ್ಕೆ ಎರಡು ಮಾವಿನಕಾಯಿ
₹5ಕ್ಕೆ ಒಂದು ಮಾವಿನಕಾಯಿ ಕೊಂಡರೆ ಮತ್ತೊಂದು ಉಚಿತ ಎಂದು ಎಂ.ಎಸ್‌.ಗಗನ್‌ಗೌಡ ಕೂಗಿ ಹೇಳುತ್ತಿದ್ದ. ಊರಿನಿಂದ ತಂದಿದ್ದ ಮಾವಿನಕಾಯಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದ. ಕಿತ್ತಳೆ ಹಣ್ಣುಗಳನ್ನೂ ಮಾರಾಟ ಮಾಡಿದ. ಒಂದನೇ ತರಗತಿ ವಿದ್ಯಾರ್ಥಿಗಳಾದ ಅಪೂರ್ವಾ, ಪಾವನಿ, ವಿಭಾ ಬಿಸ್ಕತ್ತು, ಚಾಕೋಲೆಟ್‌ ಮಾರಾಟ ಮಾಡಿದರು.

ಮೇಳದಲ್ಲಿ 450 ವಿದ್ಯಾರ್ಥಿಗಳು
ಚಿಣ್ಣರ ಸಂತೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಯಾವುದೇ ರೀತಿಯ ಸ್ಪರ್ಧೆ ಇರುವುದಿಲ್ಲ. ಇಂತಿಷ್ಟೇ ಮಾರಾಟ ಮಾಡಬೇಕು ಎಂಬ ಗುರಿಯೂ ವಿಧಿಸಿಲ್ಲ.

ತಮ್ಮ ಸ್ವಂತ ಕಾಲ ಮೇಲೆ ನಿಂತು ಜೀವನ ಸಾಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಡುವುದು ಹಾಗೂ ಜಾಗೃತಿ ಮೂಡಿಸುವುದು ಸಂತೆಯ ಉದ್ದೇಶ. ಇದರಲ್ಲಿ 450 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ರಂಗಾಯಣದ ನಿರ್ದೇಶಕಿ ಭಾಗೀರತಿಬಾಯಿ ಕದಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.