ಸಾಗರ: ‘ಮನಸ್ಸಿನ ಮಾತುಗಳಿಗೆ ಭಾಷೆಯನ್ನು ಕನ್ನಡಿಯಂತೆ ಬಳಸುವ ಮೂಲಕ ಡಾ.ಡಿ.ಎನ್.ಶಂಕರ ಭಟ್ ಅವರು ಕನ್ನಡ ಭಾಷಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಹೇಳಿದರು.
ತಾಲ್ಲೂಕಿನ ಮುಂಗರವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಷಾ ಶಾಸ್ತ್ರಜ್ಞ ಡಾ.ಡಿ.ಎನ್.ಶಂಕರಭಟ್ ಅವರಿಗೆ 2012ನೇ ಸಾಲಿನ ‘ಪಂಪ ಪ್ರಶಸ್ತಿ’ ನೀಡಿ ಅವರು ಮಾತನಾಡಿದರು.
‘ಪ್ರಶಸ್ತಿ ಶಿಫಾರಸ್ಸುಗಳ ಮೂಲಕ ಬರುವಂತದ್ದಲ್ಲ. ಸದ್ದು ಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬರಬೇಕು. ಶಂಕರ ಭಟ್ ಅವರು ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ಮಾಡುತ್ತಿರುವ ಕೆಲಸಕ್ಕೆ ಪ್ರಶಸ್ತಿ ದೊರಕಿದ್ದು ಅದಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ’ ಎಂದರು.
‘ಕನ್ನಡ ಭಾಷೆಯ ಬಗ್ಗೆ ಕೆಲಸ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳ ಬಗ್ಗೆ ಸರ್ಕಾರಕ್ಕೆ ವಿಶೇಷವಾದ ಪ್ರೀತಿ ಇದೆ. ಬನವಾಸಿಯಲ್ಲಿ ನಡೆದ ಕದಂಬ ಉತ್ಸವದಲ್ಲಿ ಶಂಕರ ಭಟ್ ಅವರು ಪ್ರಶಸ್ತಿ ಸ್ವೀಕರಿಸಲು ಬಾರದೆ ಇದ್ದುದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿತ್ತು. ಅವರ ಸೂಚನೆ ಮೇರೆಗೆ ಭಟ್ ಅವರ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡುತ್ತಿರುವೆ’ ಎಂದರು.
ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ‘ಭಾಷೆಯನ್ನು ತಮ್ಮ ಅಧ್ಯಯನದ ವಸ್ತುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಶಂಕರ ಭಟ್ ಅವರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ’ ಎಂದರು.
ರಂಗಕರ್ಮಿ ಕೆ.ವಿ.ಅಕ್ಷರ ಮಾತನಾಡಿ ‘ಶಂಕರ ಭಟ್ ಅವರ ಶೈಕ್ಷಣಿಕ ಸಾಧನೆಗಳು ಎಷ್ಟು ಮುಖ್ಯವೋ ಅವರ ಋಷಿ ಸದೃಶ್ಯ ವ್ಯಕ್ತಿತ್ವ ಕೂಡ ಅಷ್ಟೆ ಮುಖ್ಯವಾದದ್ದು. ಅವರು ಯಾವತ್ತೂ ಧರ್ಮ ಅಥವಾ ನೀತಿಯ ಬಗ್ಗೆ ಬರವಣಿಗೆ ಮಾಡಿಲ್ಲ’ ಎಂದು ಹೇಳಿದರು.
‘ಬನವಾಸಿಯಲ್ಲಿ ನಡೆದ ಕದಂಬ ಉತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಲು ಶಂಕರ ಭಟ್ ಅವರು ನಿರಾಕರಿಸಿದ್ದು ಕೂಡ ಮಹತ್ವಪೂರ್ಣ ಸಂಗತಿ. ತಾನಿರುವ ನೆಲವೆ ಬನವಾಸಿ ಎಂದು ಭಾವಿಸುವಂತೆ ಪಂಪ ಹೇಳಿದ್ದ ಮಾತನ್ನು ಸಾಕ್ಷೀಕರಿಸುವ ರೀತಿಯಲ್ಲಿ ಅವರ ನಿರಾಕರಣೆ ಇದೆ’ ಎಂದರು. ಸಮಾರಂಭದಲ್ಲಿ ಶಂಕರ ಭಟ್ ಅವರ ಪತ್ನಿ ಭಾರತಿ ಭಟ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.