ADVERTISEMENT

ಶಾಲಾ ಪಠ್ಯದಲ್ಲಿ ಕೃಷಿ ಸೇರ್ಪಡೆಗೆ ಚಿಂತನೆ: ಸಿಎಂ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:55 IST
Last Updated 26 ಫೆಬ್ರುವರಿ 2011, 16:55 IST

ಹಾವೇರಿ: ‘ನಿರ್ಲಕ್ಷ್ಯಿತ ಕ್ಷೇತ್ರವಾಗುತ್ತಿರುವ ಕೃಷಿಯ ಬಗ್ಗೆ ಯುವ ಸಮುದಾಯದಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಶಾಲಾ ಪಠ್ಯದಲ್ಲಿ ಕೃಷಿ ಸಂಬಂಧಿತ ವಿಷಯ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ನವಮಣ್ಣೂರು ಗ್ರಾಮದಲ್ಲಿ ರಾಜ್ಯ ಸರ್ಕಾರದ ‘ಆಸರೆ’ ಯೋಜನೆಯಡಿ ಟಾಟಾ ಪರಿಹಾರ ಸಮಿತಿ ನಿರ್ಮಿಸಿರುವ 144 ಮನೆಗಳನ್ನು ಶನಿವಾರ ಗ್ರಾಮದ ಸಂತ್ರಸ್ತರಿಗೆ ವಿತರಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕೃಷಿ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ರೈತರು ಕೃಷಿಯನ್ನು ಬಿಟ್ಟು ಉದ್ಯೋಗ ಅರಸಿ ಶಹರ ಪ್ರದೇಶಗಳತ್ತ ಗುಳೆ ಬರುತ್ತಿದ್ದಾರೆ. ಇದೇ ರೀತಿ ಗುಳೆ ಬರುವ ಪ್ರವೃತ್ತಿ ಮುಂದುವರೆದರೆ, ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪ್ರವಾಸ: ಮಾರ್ಚ್ 10ರೊಳಗೆ ಬಜೆಟ್‌ನ ಅಧಿವೇಶನ ಮುಗಿಸಲಾಗುತ್ತದೆ. ನಂತರದ ದಿನಗಳಲ್ಲಿ ಜಿಲ್ಲಾ ಮಟ್ಟದ ಪ್ರವಾಸ ಕೈಗೊಂಡು ಅಲ್ಲಿನ ಜನಪ್ರತಿನಿಧಿಗಳು ಹಾಗೂ ಮುಖಂಡರ ಜತೆ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ನಿರ್ದಾಕ್ಷಿಣ್ಯ ಕ್ರಮ: ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಣೆ ಮಾಡುವಲ್ಲಿ ಮಧ್ಯವರ್ತಿಗಳು 500 ರಿಂದ 2 ಸಾವಿರ ರೂ.ವರೆಗೆ ಹಣ ಪಡೆಯುವ ಬಗ್ಗೆ ಮಾಹಿತಿ ಬಂದಿದೆ. ಇಂತಹ ಪ್ರಕರಣಗಳು ಪತ್ತೆಯಾದಲ್ಲಿ ಅವರ ಮೇಲೆ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.