ADVERTISEMENT

ಶಾಸಕರಿಗೆ ಘೇರಾವ್‌ ಹಾಕಿದ ಮಹಿಳೆಯರು

ಮಹಿಳೆಯರಿಗೆ ನಮಸ್ಕಾರ ಮಾಡಿ ಬೆಂಬಲಿಗರೊಂದಿಗೆ ಕಾಲ್ಕಿತ್ತ ಶಾಸಕ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ವರ್ತೂರು ಪ್ರಕಾಶ್‌
ವರ್ತೂರು ಪ್ರಕಾಶ್‌   

ಕೋಲಾರ: ತಾಲ್ಲೂಕಿನ ಚಲುವನಹಳ್ಳಿಯಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಲು ಹೋಗಿದ್ದ ‘ನಮ್ಮ ಕಾಂಗ್ರೆಸ್‌’ ಪಕ್ಷದ ಅಭ್ಯರ್ಥಿ, ಶಾಸಕ ವರ್ತೂರು ಪ್ರಕಾಶ್‌ ಅವರಿಗೆ ಗ್ರಾಮದ ಮಹಿಳೆಯರು ಘೇರಾವ್‌ ಹಾಕಿದರು.

ಗ್ರಾಮದ ಪ್ರವೇಶ ಭಾಗದಲ್ಲಿ ವರ್ತೂರು ಪ್ರಕಾಶರ ಕಾರನ್ನು ತಡೆದ ಮಹಿಳೆಯರು, ‘ಎರಡು ಚುನಾವಣೆಗಳಲ್ಲಿ ಸತತ ಗೆಲವು ಸಾಧಿಸಿದ್ದೀರಿ. ಶಾಸಕರಾಗಿ 10 ವರ್ಷದಲ್ಲಿ ಗ್ರಾಮದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಾ?’ ಎಂದು ತರಾಟೆಗೆ ತೆಗೆದುಕೊಂಡರು.

‘ಗ್ರಾಮದಲ್ಲಿ ಕುಡಿಯುವ ನೀರಿಲ್ಲ. ಒಳ ಚರಂಡಿ, ರಸ್ತೆ ಸೌಲಭ್ಯವಿಲ್ಲ. ವಾಸಕ್ಕೆ ಸರಿಯಾದ ಮನೆಯಿಲ್ಲ. ಹಿಂದಿನ ಚುನಾವಣೆ ವೇಳೆ ಗ್ರಾಮಕ್ಕೆ ಬಂದಿದ್ದ ನೀವು ನಂತರ ಇತ್ತ ತಲೆ ಹಾಕಿಲ್ಲ’ ಎಂದು ಹರಿಹಾಯ್ದರು.

ADVERTISEMENT

‘ನಿಮ್ಮನ್ನು ಕ್ಷೇತ್ರದ ಶಾಸಕರಾಗಿ ಆಯ್ಕೆ ಮಾಡಿದ್ದೇವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಪ್ತರಿಗೆ ಸವಲತ್ತು ಕಲ್ಪಿಸಿದ್ದೀರಿ. ನಾವು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ. ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದೇವೆ. ಮಕ್ಕಳನ್ನು ಓದಿಸಲು ಆಗುತ್ತಿಲ್ಲ. ನಮ್ಮ ಕಷ್ಟಕ್ಕೆ ಸ್ಪಂದಿಸದ ನಿಮಗೆ ಏಕೆ ಮತ ಹಾಕಬೇಕು?’ ಎಂದು ಶಾಸಕರಿಗೆ ಬೆವರಿಳಿಸಿದರು.

ಅಂತಿಮವಾಗಿ ಶಾಸಕರು ಮಹಿಳೆಯರಿಗೆ ನಮಸ್ಕಾರ ಮಾಡಿ ಬೆಂಬಲಿಗರೊಂದಿಗೆ ಕಾಲ್ಕಿತ್ತರು.

ವರ್ತೂರು ಪ್ರಕಾಶ್‌ ಅವರು ಚುನಾವಣಾ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಮೇ 2ರಂದು ಕೋಲಾರದ ಗಾಂಧಿನಗರ ನಿವಾಸಿಗಳು ಶಾಸಕರ ಚುನಾವಣಾ ಪ್ರಚಾರಕ್ಕೆ ಅವಕಾಶ ಕೊಡದೆ ವಾಪಸ್‌ ಕಳುಹಿಸಿದ್ದರು. ನಗರದ 13ನೇ ವಾರ್ಡ್‌ ನಿವಾಸಿಗಳು ಶುಕ್ರವಾರ (ಮೇ 4) ಕಪ್ಪುಪಟ್ಟಿ ಧರಿಸಿ ಧರಣಿ ಮಾಡಿ ಶಾಸಕರು ಪ್ರಚಾರ ನಡೆಸಲು ವಾರ್ಡ್‌ಗೆ ಬರಬಾರದೆಂದು ವಿರೋಧ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.