ADVERTISEMENT

ಶಾಸಕರು, ಅಧಿಕಾರಿಗಳ ಪ್ರವಾಸ ಭರಾಟೆ

ವೆಂಕಟೇಶ್ ಜಿ.ಎಚ್
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕರು, ಸಚಿವರು ಹಾಗೂ ಸಚಿವಾಲಯದ ಅಧಿಕಾರಿ-ಸಿಬ್ಬಂದಿ ವರ್ಗ ಶುಕ್ರವಾರ ಬಹುತೇಕ ಪ್ರೇಕ್ಷಣೀಯ ಸ್ಥಳ, ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಸಂಭ್ರಮದ ಸಿದ್ಧತೆಯಲ್ಲಿ ಮುಳುಗಿದ್ದರು.

ಅಧಿವೇಶನಕ್ಕೆ ಶನಿವಾರ, ಭಾನುವಾರ ಬಿಡುವು. ರಜೆ ಕಳೆಯಲು ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಅಣಿಯಾಗಿದ್ದರು. ಧರಣಿ ಕಾರಣ ಕಲಾಪ ಮಧ್ಯಾಹ್ನಕ್ಕೆ ಮೊಟಕುಗೊಂಡಿದ್ದು ಪ್ರವಾಸದ ಸಿದ್ಧತೆ ಹಾಗೂ ಊರುಗಳಿಗೆ ತೆರಳಲು ನೆರವಾಯಿತು.

ಳಗಾವಿಗೆ ಗೋವಾ ಹತ್ತಿರ. ಕೆಲವು ಶಾಸಕರು, ಅಧಿಕಾರಿಗಳು ಅಲ್ಲಿಗೆ ತೆರಳುವ ಸಿದ್ಧತೆಯಲ್ಲಿದ್ದರು. ಇನ್ನೂ ಕೆಲವರು ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನ, ಶಿರಡಿ ಸಾಯಿಬಾಬಾ ಮಂದಿರ, ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಯಾತ್ರೆ ಹೊರಟಿದ್ದರು. ಕೂಡಲಸಂಗಮ, ಆಲಮಟ್ಟಿ, ನವಿಲುತೀರ್ಥ ಡ್ಯಾಂ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕಿತ್ತೂರು ಕೂಡ ಪ್ರವಾಸದ ಪಟ್ಟಿಯಲ್ಲಿದ್ದವು. ಮುಂಜಾನೆ ಕಲಾಪಕ್ಕೆ ಮುನ್ನ ವಿಧಾನ ಪರಿಷತ್ ಮೊಗಸಾಲೆಯಲ್ಲಿ ಕುಳಿತಿದ್ದ ಶಾಸಕರು, ಸಚಿವಾಲಯದ ಅಧಿಕಾರಿಗಳು ತಮ್ಮ ಆಪ್ತ ಸಹಾಯಕರ ಮೂಲಕ ಬೆಳಗಾವಿಯ ಟ್ರಾವೆಲ್ ಏಜೆನ್ಸಿಗಳಿಂದ ಪ್ರವಾಸಿ ತಾಣ ಹಾಗೂ ಅಲ್ಲಿನ ವಸತಿ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.

ಶಾಸಕ ರಮೇಶ ಭೂಸನೂರ ಮಗನ ಮದುವೆ ಸಿಂದಗಿಯಲ್ಲಿ ಭಾನುವಾರ ನಡೆಯಲಿದೆ. ಕೆಲವು ಶಾಸಕರು ಅಲ್ಲಿಗೆ ತೆರಳುವ ಯೋಚನೆಯಲ್ಲಿದ್ದರು. ಕಾಂಗ್ರೆಸ್‌ನ ಟಿ.ಜಾನ್ ಅವರು ಮಡಿಕೇರಿಯತ್ತ ಮುಖ ಮಾಡಿದ್ದರು. ಕೇಳಿದರೆ, `ಪ್ರವಾಸಕ್ಕೆ ವಯಸ್ಸು ಸ್ಪಂದಿಸುವುದಿಲ್ಲ' ಎಂದರು.

`ಕೆಲವು ಗೆಳೆಯರು ಗೋವಾಕ್ಕೆ ಹೊರಟಿದ್ದಾರೆ. ನನಗೂ ಕರೆದರು. ತುರ್ತು ಕೆಲಸ ಇರುವುದರಿಂದ ಬೆಂಗಳೂರಿಗೆ ಹೋಗುತ್ತಿದ್ದೇನೆ' ಎಂದು ಜೆಡಿಎಸ್‌ನ ಪುಟ್ಟಣ್ಣ ಪ್ರತಿಕ್ರಿಯಿಸಿದರು.

ಕಾವೇರಿ ಕಣಿವೆಯಲ್ಲಿ ಧರಣಿ- ಪ್ರತಿಭಟನೆಗಳು ಇರುವ ಕಾರಣ ಆ ಭಾಗದ ಶಾಸಕರು ತುರಾತುರಿಯಲ್ಲಿ ಊರಿಗೆ ಹೊರಟಿದ್ದರು.

ಸಿಬ್ಬಂದಿಗೆ ಪ್ರವಾಸ ಆಯೋಜನೆ:
ಸುವರ್ಣ ವಿಧಾನಸೌಧದ ಅಧಿಕಾರಿ ಹಾಗೂ ಸಿಬ್ಬಂದಿಗೆ ಶಾಸನ ರಚನಾ ಶಾಖೆಯಿಂದಲೇ ಎರಡು ದಿನದ ಪ್ರವಾಸ ಆಯೋಜಿಸಲಾಗಿದೆ. ಪ್ರವಾಸಕ್ಕೆ ಹೋಗುವವರು ಶಾಖೆಯ ಅಧೀನ ಕಾರ್ಯದರ್ಶಿ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಹೆಸರು ನೋಂದಾಯಿಸಲು ತಿಳಿಸಲಾಗಿತ್ತು. ಕೆಲವು ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಪ್ರವಾಸದ ವ್ಯವಸ್ಥೆ ಮಾಡಿಕೊಂಡಿದ್ದರು.

ವಿಧಾನಪರಿಷತ್ ಸಭಾಂಗಣದ ಭದ್ರತೆ ಉಸ್ತುವಾರಿ ಹೊತ್ತಿದ್ದ ಮಾರ್ಷಲ್‌ಗಳಾದ ಬೆಂಗಳೂರಿನ ನಾರಾಯಣಸ್ವಾಮಿ, ಚಿಕ್ಕಣ್ಣಯ್ಯ, ವಿಜಯಸಾರಥಿ ಗೋವಾ ಪ್ರವಾಸದ ಹುಮ್ಮಸ್ಸಿನಲ್ಲಿದ್ದರು. ಸಚಿವಾಲಯದ ಸಿಬ್ಬಂದಿ ತುಮಕೂರಿನ ಶ್ರೀಕಾಂತ್‌ಗೆ  ಕಿತ್ತೂರಿನ ರಾಣಿ ಚೆನ್ನಮ್ಮನ ಕೋಟೆ ನೋಡುವ ತವಕ.

ಬಹುತೇಕರು ಗೋವಾಗೆ ತೆರಳಲು ರೈಲು ಹಾಗೂ ಬಸ್‌ನ ವ್ಯವಸ್ಥೆಯ ಬಗ್ಗೆ ಸ್ಥಳೀಯ ಸಹೋದ್ಯೋಗಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಅಪರೂಪಕ್ಕೆ ತಮ್ಮ ಭಾಗದಲ್ಲಿ ನಡೆಯುತ್ತಿರುವ ಅಧಿವೇಶನದ ಕರ್ತವ್ಯಕ್ಕೆ ಬಂದಿರುವ ಉತ್ತರ ಕರ್ನಾಟಕ ಭಾಗದ ನೌಕರರು ರಜೆ ಕಳೆಯಲು ತಮ್ಮೂರಿಗೆ  ತೆರಳುವ ಸಿದ್ಧತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT