ADVERTISEMENT

ಶಾಸಕರ ಎದುರೇ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:56 IST
Last Updated 17 ಆಗಸ್ಟ್ 2016, 19:56 IST
ಲಕ್ಷ್ಮೀಶ್
ಲಕ್ಷ್ಮೀಶ್   

ಕಡೂರು: ಆತ್ಮಹತ್ಯೆಗೆ ಶರಣಾದ ತಂದೆಗೆ ಪರಿಹಾರ ಬಾರದೇ ಇದ್ದುದರಿಂದ ಬೇಸತ್ತ ಮಗನೂ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶಾಸಕ ಸಿ.ಟಿ.ರವಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿಯೇ ಬುಧವಾರ ನಡೆದಿದೆ.

ಕಡೂರು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಬುಧವಾರ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದ ಪಕ್ಕದಲ್ಲಿ ನಿರ್ಮಿಸಲಾಗಿರುವ ಯಾತ್ರಿನಿವಾಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಪಾಲ್ಗೊಂಡಿದ್ದರು.

  ಆ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಲಕ್ಷ್ಮೀಶ ಎಂಬಾತ ತನ್ನ ತಂದೆ ಭೂತಯ್ಯನವರು ಬೆಳೆ ನಷ್ಟ ಹಾಗೂ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, 8 ತಿಂಗಳು ಕಳೆದಿದೆ.

ಆದರೂ ಯಾವುದೇ ಪರಿಹಾರ ಸರ್ಕಾರದಿಂದ ಸಿಕ್ಕಿಲ್ಲ ಎಂದು ನೋವು ತೋಡಿಕೊಂಡರು. ಶಾಸಕ ಸಿ.ಟಿ. ರವಿ ಅವರು ಈ ಕುರಿತು ಪರಿಶೀಲಿಸಿ ಪರಿಹಾರ ದೊರಕಿಸುವ ಭರವಸೆ ನೀಡಿದರು. ಕಾರ್ಯಕ್ರಮದ ನಂತರ ಸಿ.ಟಿ.ರವಿ ಹೊರಡಲು ಸಿದ್ದರಾಗುತ್ತಿದ್ದಂತೆ  ವೇದಿಕೆಗೆ ಏರಿದ ಲಕ್ಷ್ಮೀಶ ತನ್ನೊಂದಿಗೆ ತಂದಿದ್ದ ಕ್ರಿಮಿನಾಶಕ ಕುಡಿದು ‘ಸರ್ಕಾರ ಪರಿಹಾರ ನೀಡಿಲ್ಲ.

ನಮ್ಮ ಕುಟುಂಬ ಬೀದಿಗೆ ಬಂದಿದೆ, ನಮಗೆ ಅನ್ಯಾಯವಾಗಿದೆ’ ಎಂದು ಶಾಸಕರ ವಾಹನದತ್ತ ಓಡಿದಾಗ, ಕೂಡಲೇ ಶಾಸಕರು ಆತನನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲು ವ್ಯವಸ್ಥೆ ಮಾಡಿದ್ದಾರೆ. ಸ್ಥಳದಲ್ಲಿದ್ದ ದೇವನೂರು ಜಿಲ್ಲಾ ಪಂಚಾಯ್ತಿ ಸದಸ್ಯ ವಿಜಯಕುಮಾರ್ ಆತನನ್ನು ಆಸ್ಪತ್ರೆಗೆ ಸೇರಿಸಿ ನಂತರ ವೈದ್ಯರ ಸಲಹೆಯಂತೆ ಶಿವಮೊಗ್ಗದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.