ADVERTISEMENT

ಶಾಸಕರ ಮಗ, ಸಂಬಂಧಿ ಬಂಧನ

ಅದಿರು ಕಳ್ಳಸಾಗಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಯಲ್ಲಾಪುರದ ಕಾಂಗ್ರೆಸ್‌ ಶಾಸಕ ಅರಬೈಲ್‌ ಶಿವರಾಮ ಹೆಬ್ಬಾರ್‌ ಅವರ ಮಗ ವಿವೇಕ ಹೆಬ್ಬಾರ್‌ ಮತ್ತು  ಸಂಬಂಧಿ ಪ್ರಕಾಶ ಹೆಗಡೆ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ.

ವಿವೇಕ ಅವರು ಯಲ್ಲಾಪುರದ ಡ್ರೀಮ್‌ ಲಾಜಿಸ್ಟಿಕ್ಸ್‌ ಕಂಪೆನಿಯ ಮಾಲೀ­ಕರು. ಸುಪ್ರೀಂಕೋರ್ಟ್‌ ಆದೇಶದಂತೆ ಈ ಕಂಪೆನಿಯ ವಿರುದ್ಧ ಪ್ರಕರಣ ದಾಖ­ಲಿಸಿದ್ದ ಸಿಬಿಐ ತನಿಖೆ ನಡೆಸಿ ನ. 30ರಂದು ಮೊದಲ ಆರೋಪಪಟ್ಟಿ ಸಲ್ಲಿಸಿತ್ತು.

ಪ್ರಕರಣದ ತನಿಖೆ ಮುಂದುವರಿಸಿದ ಸಿಬಿಐ ಅಧಿಕಾರಿಗಳು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ವಿವೇಕ ಮತ್ತು ಪ್ರಕಾಶ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಅಲ್ಲಿಗೆ ಬಂದ ಇಬ್ಬರನ್ನೂ ಬಂಧಿಸಲಾಯಿತು. 2009ರ ಜನವರಿ 1ರಿಂದ 2010ರ ಮೇ 31ರ ಅವಧಿಯಲ್ಲಿ ಡ್ರೀಮ್‌ ಲಾಜಿಸ್ಟಿಕ್ಸ್‌ ಬೇಲೆಕೇರಿ ಬಂದರಿನ ಮೂಲಕ 9 ಲಕ್ಷ ಟನ್‌ ಕಬ್ಬಿಣದ ಅದಿರನ್ನು ರಫ್ತು ಮಾಡಿತ್ತು.

ಈ ಪೈಕಿ ಮೂರು ಲಕ್ಷ ಟನ್‌ಗೂ ಹೆಚ್ಚು ಅದಿರು ಕಳ್ಳತನ ಮಾಡಿದ್ದಾಗಿತ್ತು ಎಂದು ಸಿಬಿಐ ಅಧಿಕಾರಿಗಳು ಆರೋಪಪಟ್ಟಿಯಲ್ಲೇ ನ್ಯಾಯಾಲಯಕ್ಕೆ ತಿಳಿಸಿದ್ದರು.
ಶುಕ್ರವಾರದವರೆಗೆ ಸಿಬಿಐ ವಶಕ್ಕೆ: ಆರೋಪಿಗಳನ್ನು  ಬೌರಿಂಗ್‌ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸ­ಲಾಯಿತು. ನಂತರ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸ­ಲಾಯಿತು. ಸಿಬಿಐ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ವಿ.ಶ್ರೀಶಾನಂದ ಅವರು, ಆರೋಪಿಗಳನ್ನು ಶುಕ್ರವಾರದವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT