ADVERTISEMENT

ಶಿಕ್ಷಕರ ವರ್ಗಾವಣೆ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST

ಬೆಂಗಳೂರು: ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯಬೇಕಿದ್ದ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದ್ದು, ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ.

ರಾಜ್ಯ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪದವೀಧರರ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದೆ. ಇದರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಎಂ.ಟಿ. ರೇಜು ತಿಳಿಸಿದರು.

‘ಬೆಂಗಳೂರು, ಮೈಸೂರು, ಕಲಬುರ್ಗಿ ವಿಭಾಗದ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಘೋಷಣೆ
ಯಾಗಿದ್ದು, ಜೂನ್ 8ರಂದು ಮತದಾನ ಹಾಗೂ ಜೂನ್‌ 12ಕ್ಕೆ ಮತ ಎಣಿಕೆ ನಡೆಯಲಿದೆ. ಈ ಚುನಾವಣೆ ಶಿಕ್ಷಕರಿಗೆ ಸಂಬಂಧಿಸಿದ್ದರಿಂದ ವರ್ಗಾವಣೆ ಪ್ರಕ್ರಿಯೆ ನಡೆಸುವುದು ಕಷ್ಟ. ಅಷ್ಟರೊಳಗೆ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ’ ಎಂದರು.

ADVERTISEMENT

ಶೈಕ್ಷಣಿಕ ವರ್ಷದ ಕೊನೆಯಲ್ಲಿ ಆದ ವರ್ಗಾವಣೆ ಆದೇಶದಂತೆ ಶಿಕ್ಷಕರು ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೌನ್ಸೆಲಿಂಗ್‌ ನಡೆಸುವುದು ಬಾಕಿ ಇದೆ.

2018–19ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 28ರಿಂದಲೇ ಆರಂಭಗೊಳ್ಳುತ್ತವೆ. ವೇಳಾಪಟ್ಟಿ ಸಿದ್ಧಪಡಿಸಿ, ಕೌನ್ಸೆಲಿಂಗ್‌ ನಡೆಸಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅದು ಪೂರ್ಣಗೊಂಡು, ವರ್ಗಾವಣೆಗೊಂಡ ಶಾಲೆಗೆ ಶಿಕ್ಷಕರು ಹೋಗುವಷ್ಟರಲ್ಲಿ ಇನ್ನೊಂದು ತಿಂಗಳು ಕಳೆದಿರುತ್ತದೆ.

‘ಜೂನ್‌ 1ರೊಳಗೆ ವರ್ಗಾವಣೆ ಪೂರ್ಣಗೊಳಿಸಬೇಕು. ಅದಕ್ಕಾಗಿ ಎಲ್ಲಾ ಉಪ ನಿರ್ದೇಶಕರು ಸಿದ್ಧತೆಗಳನ್ನು ಮಾಡಿಕೊಳ್ಳಿ’ ಎಂದು ಮೇ ಮೊದಲ ವಾರದಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸುತ್ತೋಲೆ ಹೊರಡಿಸಿದ್ದರು.

ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯುತ್ತಿದ್ದ ಕೌನ್ಸೆಲಿಂಗ್‌ ಈ ವರ್ಷ ಆಯಾ ಬಿಇಒ ಕಚೇರಿಯಲ್ಲಿ ನಡೆಸಬೇಕು. ಖಾಲಿಯಿರುವ ಹುದ್ದೆಗಳ ಪಟ್ಟಿಯನ್ನು ಬಿಇಒ ಕಚೇರಿಯ ಕಂಪ್ಯೂಟರ್‌ನಲ್ಲೇ ತೋರಿಸಿ, ಅಲ್ಲಿಯೇ ಹುದ್ದೆಯ ಸ್ಥಳ ಆಯ್ಕೆ ಮಾಡಲು ಅವಕಾಶ ಕಲ್ಪಿಸಬೇಕು. ನಂತರ ಉಪನಿರ್ದೇಶಕರು ಆದ್ಯತೆ ಮೇರೆಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.