ADVERTISEMENT

ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು- ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 19:00 IST
Last Updated 14 ಫೆಬ್ರುವರಿ 2011, 19:00 IST

ಬೆಂಗಳೂರು: ಶಿಕ್ಷಣ ಸಂಸ್ಥೆಗಳ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಹೈಕೋರ್ಟ್ ಆದೇಶದ ಹೊರತಾಗಿಯೂ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವವರಿಗೆ ‘ಬುದ್ಧಿ ಕಲಿಸಲು’ ನಿರ್ಧರಿಸಿರುವ ಕೋರ್ಟ್, ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಅನುದಾನಿತ ಶಿಕ್ಷಣ ಸಂಸ್ಥೆಗಳಾದರೆ ಅವರಿಗೆ ನೀಡಲಾಗುವ ಅನುದಾನವನ್ನು ರದ್ದು ಪಡಿಸುವ ಸಂಬಂಧ ಹಾಗೂ ಮಾನ್ಯತೆಯನ್ನು ಹಿಂದಕ್ಕೆ ಪಡೆಯುವುದಾಗಿ ನೋಟಿಸ್ ಜಾರಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಿ, ಅವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡುವಂತೆ ಪೀಠ ಸೂಚಿಸಿದೆ. ಈ ಎರಡೂ ನೋಟಿಸ್‌ಗಳನ್ನು ಬರುವ ಸೋಮವಾರದ ಒಳಗೆ ಜಾರಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.

ಶಾಲಾ, ಕಾಲೇಜುಗಳ ಸುತ್ತಲೂ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಮಾರಾಟವನ್ನು ನಿಷೇಧಿಸಿರುವ ಹಾಗೂ ‘ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನ (ಜಾಹೀರಾತು ನಿಷೇಧ, ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ)-2003 ಕಾಯ್ದೆಯ 6ನೇ ಕಲಮಿನ ಜಾರಿಯನ್ನು ಕಟ್ಟುನಿಟ್ಟು ಮಾಡಲು ಆದೇಶಿಸುವಂತೆ ಕೋರಿ ‘ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ಸಂಘ’ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಅಧ್ಯಯನದ ಪ್ರಕಾರ ಶೇ 15.1ರಷ್ಟು ವಿದ್ಯಾರ್ಥಿಗಳು ಒಂದು ಬಾರಿಯಾದರೂ ವಿವಿಧ ಬಗೆಯ ತಂಬಾಕು ಉತ್ಪನ್ನಗಳನ್ನು ಸೇವಿಸಿದ್ದಾರೆ. ಇವರಲ್ಲಿ ಶೇ 90.12 ವಿದ್ಯಾರ್ಥಿಗಳು ಧೂಮಪಾನಿಗಳಾಗಿದ್ದರೆ, ಶೇ 31.1ರಷ್ಟು ಮಂದಿ ತಂಬಾಕು ಅಂಶವುಳ್ಳ ಉತ್ಪನ್ನಗಳನ್ನು ಜಗಿಯುತ್ತಿದ್ದಾರೆ. ಇನ್ನು ಶೇ 28.4ರಷ್ಟು ವಿದ್ಯಾರ್ಥಿಗಳು ಇತರ ವ್ಯಸನಗಳಿಗೆ ಮಾರುಹೋಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸರ್ಕಾರ ತರಾಟೆಗೆ: ಕಳೆದ ಬಾರಿ ವಿಚಾರಣೆಯ ಸಂದರ್ಭದಲ್ಲಿಯೂ ಸೂಕ್ತ ಕ್ರಮಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ ಇದನ್ನು ಪಾಲನೆ ಮಾಡದ ಕ್ರಮಕ್ಕೆ ಸರ್ಕಾರವನ್ನು ಪೀಠ ತರಾಟೆಗೆ ತೆಗೆದುಕೊಂಡಿತು.

‘ಈ ಶಿಕ್ಷಣ ಸಂಸ್ಥೆಯ ಸುತ್ತಮುತ್ತ ತಂಬಾಕು ಉತ್ಪನ್ನ ನಿಷೇಧಿಸಲಾಗಿದೆ’ ಎಂಬ ಬಗ್ಗೆ ಫಲಕ ಹಾಕದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರ ವಿರುದ್ಧ ಏಕೆ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. ಇವುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬೀದಿ ವ್ಯಾಪಾರಿಗಳಿಗೆ ನೀವೇ ಉತ್ತೇಜನ ನೀಡುತ್ತಿದ್ದೀರಿ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಬೆಂಗಳೂರು ಒಂದರಲ್ಲಿಯೇ 41 ಶಾಲಾ ಕಾಲೇಜುಗಳ ಆಸುಪಾಸಿನಲ್ಲಿ ನಿಯಮ ಉಲ್ಲಂಘಿಸಿ ಸಿಗರೇಟ್ ಸೇರಿದಂತೆ ಇತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅರ್ಜಿದಾರರ ಪರ ವಕೀಲೆ ಜೈನಾ ಕೊಥಾರಿ ಪೀಠದ ಗಮನಕ್ಕೆ ತಂದರು. ಅದರಲ್ಲಿ ಪ್ರತಿಷ್ಠಿತ ಸಂಸ್ಥೆಗಳಾಗಿರುವ ನಗರದ ಬಿಷಪ್ ಕಾಟನ್ ಹೆಣ್ಣುಮಕ್ಕಳ ಶಾಲೆ, ಯೂನಿವರ್ಸಿಟಿ ಲಾ ಕಾಲೇಜು, ಸುರಾನಾ ಕಾಲೇಜು, ಭಗವಾನ್ ಮಹಾವೀರ ಜೈನ್ ಸಂಜೆ ಕಾಲೇಜು, ಎಂ.ಎಸ್.ರಾಮಯ್ಯ ವಿದ್ಯಾಸಂಸ್ಥೆ ಇತ್ಯಾದಿ ಒಳಗೊಂಡಿವೆ. ಅರ್ಜಿದಾರರ ಈ ಆರೋಪಗಳ ಬಗ್ಗೆ ಸತ್ಯಾಸತ್ಯತೆ ಪರೀಕ್ಷಿಸಲು ಸರ್ಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ಪೀಠ, ವಿಚಾರಣೆಯನ್ನು ಬರುವ ಮಂಗಳವಾರಕ್ಕೆ (ಫೆ.22) ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.