ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಜಾರಿ ಫಲಶ್ರುತಿ: 6 ಲಕ್ಷ ಮಕ್ಕಳಿಗೆ ಉಚಿತ ವ್ಯಾಸಂಗ

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅನುಸಾರ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ನೀಡುವುದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ ಬಡವರು ಮತ್ತು ಮಧ್ಯಮ ವರ್ಗದ ಸುಮಾರು ಆರು ಲಕ್ಷ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ವ್ಯಾಸಂಗ ಮಾಡುವ ಅವಕಾಶ ದೊರೆಯಲಿದೆ.

 ಪೂರ್ವ ಪ್ರಾಥಮಿಕ ಹಂತದಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ ಅನ್ವಯವಾಗಲಿದೆ. ಪ್ರತಿಯೊಂದು ತರಗತಿಯಲ್ಲಿ ಲಭ್ಯವಿರುವ ಒಟ್ಟಾರೆ ಸೀಟುಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ನೀಡಿದರೆ ಖಾಸಗಿ ಶಾಲೆಗಳಲ್ಲಿ ಪ್ರತಿ ತರಗತಿಗೆ ವಾರ್ಷಿಕ ಸುಮಾರು 75 ಸಾವಿರ ಮಕ್ಕಳಿಗೆ ಪ್ರವೇಶ ಲಭ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ಅಂದಾಜಿಸಿದೆ.

ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಅನುದಾನರಹಿತ ಖಾಸಗಿ ಪ್ರಾಥಮಿಕ ಶಾಲೆಗಳಿವೆ. ಪ್ರತಿಯೊಂದು ತರಗತಿಯಲ್ಲಿ ನಿಗದಿತ ಪ್ರಮಾಣದ ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಸ್ಥಳೀಯ ಮಕ್ಕಳಿಗೆ ನೀಡುವುದು ಕಾಯ್ದೆ ಪ್ರಕಾರ ಕಡ್ಡಾಯ.

ಈ ವರ್ಷ ಪೂರ್ವ ಪ್ರಾಥಮಿಕ ಹಂತ ಮತ್ತು ಒಂದನೇ ತರಗತಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಎಲ್ಲ ಶಾಲೆಗಳು ಪ್ರಸಕ್ತ ಸಾಲಿನಿಂದಲೇ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಸೀಟುಗಳನ್ನು  ಬಡ ಕುಟುಂಬಗಳ ಮಕ್ಕಳಿಗೆ ನೀಡಬೇಕಾಗುತ್ತದೆ.

ಸರ್ಕಾರಿ ಶಾಲೆಯಲ್ಲಿ ಪ್ರತಿ ಮಗುವಿಗೆ ಶಿಕ್ಷಣ ನೀಡಲು ವಾರ್ಷಿಕ 11 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರವೇ ಲೆಕ್ಕ ಹಾಕಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯುವ ಶೇ 25ರಷ್ಟು ಮಕ್ಕಳ ವ್ಯಾಸಂಗದ ವೆಚ್ಚವನ್ನು ಆಡಳಿತ ಮಂಡಳಿಗಳಿಗೆ ಮರುಪಾವತಿ ಮಾಡುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಖಾಸಗಿ ಶಾಲೆಗಳಲ್ಲಿ ಶುಲ್ಕ ಪ್ರಮಾಣ ಬೇರೆ ಬೇರೆ ರೀತಿ ಇದೆ. ಆ ಪ್ರಕಾರ ಶುಲ್ಕ ಮರುಪಾವತಿ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಲು ತಗಲುವ ವೆಚ್ಚವನ್ನು ಆಧರಿಸಿ ಖಾಸಗಿ ಶಾಲೆಗಳಿಗೆ ಏಕರೂಪದಲ್ಲಿ ಶುಲ್ಕ ಮರುಪಾವತಿ ಮಾಡಲು ಯೋಚಿಸಲಾಗಿದೆ~ ಎಂದರು.

ವಾರ್ಷಿಕ 11 ಸಾವಿರ ರೂಪಾಯಿ ಪ್ರಕಾರ 75 ಸಾವಿರ ಮಕ್ಕಳ ಶುಲ್ಕ ಮರುಪಾವತಿಗೆ 82 ಕೋಟಿ ರೂಪಾಯಿ ವೆಚ್ಚವಾಗಲಿದೆ. ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ತಗಲುವ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವಾಗಿ ಶೇ 65:35ರಷ್ಟು ಹಣವನ್ನು ಭರಿಸಲಿವೆ. ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲೇ ಈ ಕಾಯ್ದೆ ಅನುಷ್ಠಾನಗೊಳ್ಳಲಿದೆ.

ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಲು ಸರ್ಕಾರ ಇದುವರೆಗೆ ಯಾವುದೇ ಮಾನದಂಡ ನಿಗದಿಪಡಿಸಿಲ್ಲ. ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು ರೂ 3.5 ಲಕ್ಷಕ್ಕೆ ನಿಗದಿಪಡಿಸಿದೆ. ಅದನ್ನೇ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೂ ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಇದೇ 5ರಂದು ನಡೆಯುವ ಸಭೆಯಲ್ಲಿ ಪೋಷಕರ ಆದಾಯದ ಮಿತಿಯನ್ನು ನಿಗದಿಪಡಿಸಲಾಗುತ್ತದೆ. ಎರಡು ವಾರಗಳ ಒಳಗೆ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಅಗತ್ಯವಿರುವ ಆದೇಶಗಳನ್ನು ಹೊರಡಿಸಲಾಗುವುದು ಎಂದು ಅವರು ವಿವರಿಸಿದರು.

ಖಾಸಗಿ ಶಾಲೆಗಳು ಹಿಂದುಳಿದ ವರ್ಗದ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ. ಪ್ರವೇಶ ನೀಡುವಾಗ ಮಕ್ಕಳಿಗೆ, ಪೋಷಕರಿಗೆ ಸಂದರ್ಶನ ನಡೆಸುವಂತಿಲ್ಲ. ಮಕ್ಕಳನ್ನು ಶಿಕ್ಷಿಸಲು, 8ನೇ ತರಗತಿವರೆಗೂ ಅನುತ್ತೀರ್ಣಗೊಳಿಸಲು ಅವಕಾಶವಿಲ್ಲ. ಯಾವುದೇ ರೀತಿಯ ನೆಪಗಳನ್ನು ಹೇಳದೆ ಸರ್ಕಾರದ ಮಾನದಂಡದ ಪ್ರಕಾರ ಶಾಲೆಯ ನೆರೆಹೊರೆ ಪ್ರದೇಶಗಳ ಮಕ್ಕಳಿಗೆ ಪ್ರವೇಶ ನೀಡಬೇಕಾಗುತ್ತದೆ.

ಶಿಕ್ಷಣ ಹಕ್ಕು ಕಾಯ್ದೆಗೆ ಅನುಗುಣವಾಗಿ ಸರ್ಕಾರಿ ಶಾಲೆಗಳು ಅಷ್ಟೇ ಅಲ್ಲದೆ ಖಾಸಗಿ ಶಾಲೆಗಳೂ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕಾಗುತ್ತದೆ. ಕಾಯ್ದೆ ಜಾರಿಗೆ ಬಂದ ಮೂರು ವರ್ಷಗಳ ಒಳಗೆ ಕಾಂಪೌಂಡ್, ಕುಡಿಯುವ ನೀರು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಆಟದ ಮೈದಾನ ಇತ್ಯಾದಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳ ವಿರೋಧ: ಅಲ್ಪಸಂಖ್ಯಾತರ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಿಂದ ವಿನಾಯಿತಿ ನೀಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕುಸ್ಮಾ) ಅಧ್ಯಕ್ಷ ಜಿ.ಎಸ್.ಶರ್ಮ ತಿಳಿಸಿದರು.

`ಶೇ 25ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ನೀಡುವುದಕ್ಕೆ ನಮ್ಮ ಸಮ್ಮತಿ ಇಲ್ಲ. ನಮಗೆ ಸರ್ಕಾರದ ಅನುದಾನ ಬೇಕಾಗಿಲ್ಲ. ಅನುದಾನ ಪಡೆದರೆ ಸ್ವಾತಂತ್ರ್ಯ ಹೋಗುತ್ತದೆ. ಗುಲಾಮರಾಗಲು ಇಷ್ಟವಿಲ್ಲ. ಸರ್ಕಾರ ರೂಪಿಸಿರುವ ನಿಯಮಗಳ ಬಗ್ಗೆ ಪೋಷಕರ ಅಭಿಪ್ರಾಯ ಪಡೆಯಲಾಗುವುದು. ಪೋಷಕರು ಒಪ್ಪಿದರೆ ಪ್ರವೇಶ ನೀಡಲು ನಮ್ಮ ಅಭ್ಯಂತರವಿಲ್ಲ~ ಎಂದು ತಿಳಿಸಿದರು.

ಬಡ ಮಕ್ಕಳಿಗೆ ಪ್ರವೇಶ ನೀಡುವುದು ಅನಿವಾರ್ಯವಾದರೆ, ದಾಖಲಾತಿ ಮಾಡಿಕೊಳ್ಳುವುದಕ್ಕೂ ಮೊದಲು ವೈದ್ಯಕೀಯ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಆ ಮಕ್ಕಳಿಗೆ ಏನೆಲ್ಲ ಕಾಯಿಲೆ ಇರುತ್ತದೊ ಯಾರಿಗೆ ಗೊತ್ತು? ಬೇರೆ ಮಕ್ಕಳಿಗೆ ಕಾಯಿಲೆ ಹರಡಿದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.