ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಾವಾಡಿಗಳ ಮತ್ತು ಮಾವುತರ ಪ್ರತಿಭಟನೆಯಿಂದ ಅರಣ್ಯ ಇಲಾಖೆ ನೌಕರರು ಶುಕ್ರವಾರ ಮೇಯಲು ಕಾಡಿಗೆ ಬಿಟ್ಟಿದ್ದ 29 ಆನೆಗಳಲ್ಲಿ 10 ಆನೆಗಳು ಎರಡು ದಿನ ಕಳೆದರೂ ಶಿಬಿರಕ್ಕೆ ಮರಳಿಲ್ಲ.
ಅವುಗಳಲ್ಲಿ ಐದು ಮರಿಗಳು ಹಾಗೂ 5 ದೊಡ್ಡ ಆನೆಗಳು ಇವೆ. ಅವು ಶಿಬಿರಕ್ಕೆ ಮರಳದಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.
ಕಾವಾಡಿಗಳು ಮತ್ತು ಮಾವುತರು ಭಾನುವಾರ ಬೆಳಗಿನಿಂದ ಅವುಗಳ ಪತ್ತೆಗಾಗಿ ಕಾಡಿನಲ್ಲಿ ಅಲೆಯುತ್ತಿದ್ದಾರೆ. ಅರಣ್ಯ ಇಲಾಖೆ ನೌಕರರು ಆನೆಗಳನ್ನು ಕಾಡಿಗೆ ಬಿಡುವಾಗ ಕಾಲಿಗೆ ಸರಪಳಿ ಹಾಕಿರಲಿಲ್ಲ ಎನ್ನಲಾಗಿದೆ. ಇದರಿಂದ ನಡೆಯಲು ಸುಲಭವಾಗಿ ಆನೆಗಳು ಬಹಳ ದೂರ ಹೋಗಿರುವ ಸಾಧ್ಯತೆ ಇದೆ ಎಂಬುದು ಮಾವುತರ ಅಭಿಪ್ರಾಯ.
ತಪ್ಪಿಸಿಕೊಂಡಿರುವ ಆನೆಗಳಲ್ಲಿ ಕೇವಲ ಮೂರು ವರ್ಷದ ಐದು ಮರಿಗಳೂ ಸೇರಿವೆ. ಕಾಡಿನ ದಿಕ್ಕು ಅರಿಯದ ಮರಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಆತಂಕ ಮಾವುತರದು.
ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಮಾವುತ ‘ಒಂದು ದಿನ ಆನೆಗಳನ್ನು ಕಾಡಿಗೆ ಬಿಡದೇ ಇದ್ದರೆ ಏನೂ ಆಗುತ್ತಿರಲಿಲ್ಲ. ಬಿಟ್ಟ ಆನೆಗಳಿಗೂ ಕಾಲಿಗೆ ಚೈನು ಹಾಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅರಣ್ಯಕ್ಕೆ ಬೆಂಕಿ ಕೊಟ್ಟಿದ್ದಾನೆ ಎಂದು ಕಾವಾಡಿ ವಿನು ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ದೂರನ್ನು ಹಿಂದಕ್ಕೆ ಪಡೆಯುವತನಕ ಪ್ರತಿಭಟನೆ ಮುಂದುವರಿಯಲಿದೆ. ಆದರೆ, ಪಾಪದ ಮೂಕಪ್ರಾಣಿಗಳಿಗೆ ಆಹಾರವಿಲ್ಲದಂತಾಗುತ್ತದೆ ಎಂದು ಕರ್ತವ್ಯಕ್ಕೆ ಹಾಜರಾಗಿದ್ದೇವೆ’ ಎಂದು ನೋವು ತೋಡಿಕೊಂಡರು.
‘ಕಾಡನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ನಮ್ಮ ಮೇಲೆಯೇ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿರುವುದು ಆತಂಕ ಮೂಡಿಸಿದೆ. ಕಾಡಿಗೆ ಬೆಂಕಿ ಕೊಟ್ಟ ಪ್ರಕರಣದ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
ಭಾನುವಾರ ಶಿಬಿರದಲ್ಲಿ ಕೆಲವು ಮಾವುತರು ಮತ್ತು ಕುಟುಂಬದವರನ್ನು ಬಿಟ್ಟರೆ ಬೇರೆ ಯಾವುದೇ ಅರಣ್ಯ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಯಾಗಲಿ ಹಾಜರಿರಲಿಲ್ಲ. ಇದರಿಂದಾಗಿ ಕೆಲವು ಪ್ರವಾಸಿಗರ ವಾಹನಗಳು ಶಿಬಿರದ ಒಳಗೆ ಪ್ರವೇಶ ಮಾಡಿ ಆನೆಗಳಿಗೆ ಅಡ್ಡಿ ಉಂಟುಮಾಡುತ್ತಿದ್ದುದು ಕಂಡು ಬಂತು. ಮಾವುತರ ಮಾತನ್ನು ಕೇಳದ ಪ್ರವಾಸಿಗರು ಮನ ಬಂದಂತೆ ಶಿಬಿರದಲ್ಲಿ ಓಡಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.