ADVERTISEMENT

ಶಿಮುಲ್‌: ಲೋಕಾಯುಕ್ತ ದಾಳಿ

ನೇಮಕಾತಿ ಅಕ್ರಮ: ನಿರ್ದೇಶಕನ ಮನೆಯಲ್ಲಿ ನಗದು, ದಾಖಲೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಬೆಂಗಳೂರು: ಶಿವಮೊಗ್ಗ ಹಾಲು ಉತ್ಪಾ­ದ­ಕರ ಸಹಕಾರಿ ಒಕ್ಕೂಟದ (ಶಿಮುಲ್‌) 103 ಹುದ್ದೆಗಳ ನೇಮಕಾತಿಯಲ್ಲಿ ಅವ್ಯ­ವ­ಹಾರ ನಡೆಸಿದ ಆರೋಪದ ಮೇಲೆ ಒಕ್ಕೂಟದ ನಿರ್ದೇಶಕ ಜಿ.ಪಿ.ರೇವಣ­ಸಿದ್ದಪ್ಪ ಮನೆ ಮತ್ತು ಕಚೇರಿಗಳ ಮೇಲೆ ಶನಿವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ನಗದು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

‘ಚಿತ್ರದುರ್ಗ ಜಿಲ್ಲೆ ಓಬವ್ವ ನಾಗತಿಹಳ್ಳಿಯಲ್ಲಿರುವ ರೇವಣಸಿದ್ದಪ್ಪ ಅವರ ಮನೆ, ಚಿಕ್ಕಬೆನ್ನೂರಿನಲ್ಲಿರುವ ಸಂಬಂಧಿಕರ ಎರಡು ಮನೆಗಳು ಹಾಗೂ ಶಿವಮೊಗ್ಗದಲ್ಲಿರುವ ಶಿಮುಲ್‌ ಕಚೇರಿ ಮೇಲೆ ಶನಿವಾರ ಏಕಕಾಲಕ್ಕೆ ದಾಳಿ ನಡೆಯಿತು. ಆರೋಪಿಯ ಮನೆಯಲ್ಲಿ ₨ 25,750 ನಗದು ಮತ್ತು ಎರಡು ಬ್ಯಾಂಕ್‌ ಲಾಕರುಗಳ ಕೀ ದೊರೆತಿವೆ. ಅವರ ಪತ್ನಿ ಬಿ.ಕೆ.ಕಲ್ಪನಾ ಬ್ಯಾಂಕ್‌ ಲಾಕರಿ­ನಲ್ಲಿ ರೂ.11.50 ಲಕ್ಷ ನಗದು ಪತ್ತೆ­ಯಾಗಿದೆ’ ಎಂದು ಲೋಕಾ­ಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.­ಸತ್ಯನಾರಾಯಣ ರಾವ್‌ ತಿಳಿಸಿದರು.

ಸಂದರ್ಶನದ ದಾಖಲೆಗಳು ಮನೆಯಲ್ಲಿ: ನೇಮಕಾತಿಯ ಸಂದರ್ಶನಕ್ಕೆ ಸಂಬಂಧಿ­ಸಿದ ಪ್ರಮುಖ ದಾಖಲೆಗಳು ರೇವಣ­ಸಿದ್ದಪ್ಪ ಅವರ ಮನೆಯಲ್ಲಿ ಪತ್ತೆ­ಯಾಗಿವೆ. ಕೆಲವು ಅಭ್ಯರ್ಥಿಗಳ ಮೌಖಿಕ ಸಂದರ್ಶನ ಪತ್ರಗಳೂ ದೊರೆತಿವೆ.

‘ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೊಂದು ಆರೋಪಿಯ ಮನೆಯಲ್ಲಿ ಲಭ್ಯವಾಗಿದೆ. ಆ ಪಟ್ಟಿಯಲ್ಲಿ ಕೆಲ ಅಭ್ಯರ್ಥಿಗಳ ಹೆಸರಿನ ಮುಂದೆ ಅಂಕಿಗಳು ಮತ್ತು ಸಂಕೇತಗಳನ್ನು ನಮೂದಿಸಿರುವುದು ಕಂಡುಬಂದಿದೆ. ಯಾವ ಉದ್ದೇಶಕ್ಕಾಗಿ ಆ ರೀತಿ ಮಾಡಲಾಗಿತ್ತು ಎಂಬುದರ ಕುರಿತು ಆರೋಪಿಯನ್ನು ಪ್ರಶ್ನಿಸಲಾಗುತ್ತಿದೆ’ ಎಂದು ರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.