ADVERTISEMENT

ಶಿವಕುಮಾರ ಸ್ವಾಮೀಜಿಗೆ 104: ಅದ್ದೂರಿ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2011, 19:30 IST
Last Updated 24 ಏಪ್ರಿಲ್ 2011, 19:30 IST
ಶಿವಕುಮಾರ ಸ್ವಾಮೀಜಿಗೆ 104: ಅದ್ದೂರಿ ಗುರುವಂದನೆ
ಶಿವಕುಮಾರ ಸ್ವಾಮೀಜಿಗೆ 104: ಅದ್ದೂರಿ ಗುರುವಂದನೆ   

ತುಮಕೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿಯವರ 104ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಮಠದ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು.

ಸ್ವಾಮೀಜಿ ಕಣ್ತುಂಬಿಕೊಂಡು, ಆಶೀರ್ವಾದ ಪಡೆಯಲು ರಾಜ್ಯದ ಮೂಲೆಮೂಲೆಗಳಿಂದ ಭಕ್ತ ಸಾಗರವೇ ಸಿದ್ದಗಂಗಾ ಮಠದತ್ತ ಹರಿದು ಬಂದಿತ್ತು. ಸಹಸ್ರಾರು ಭಕ್ತರು ಸ್ವಾಮೀಜಿ ಆಶೀರ್ವಾದ ಪಡೆದು ಇನ್ನೂ ಹತ್ತಾರು ವರ್ಷ ಬಾಳಿ, ಬದುಕಲಿ, ತ್ರಿವಿಧ ದಾಸೋಹ ಮುಂದುವರಿಸಲಿ ಎಂದು ಹರಸಿದರು.

ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಪಾಲ್ಗೊಂಡ ಗಣ್ಯರು, ಪ್ರಮುಖರು, ರಾಜಕಾರಣಿಗಳು ಸ್ವಾಮೀಜಿ ಸೇವೆಯನ್ನು ಸ್ಮರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಪ್ರೊ.ಸಿ.ಎನ್.ಆರ್.ರಾವ್, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವರು ಗುರುವಂದನೆಗೆ ಸಾಕ್ಷಿಯಾದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಿ, ’ಸ್ವಾಮೀಜಿ ಸೇವೆ ಮತ್ತು ಮಾರ್ಗದರ್ಶನ ಧರ್ಮಾತೀತವಾಗಿ ಎಲ್ಲ ವರ್ಗದವರಿಗೂ ಸಲ್ಲುತ್ತಿದೆ. ಸಮಾಜ ಸರಿ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಲೆಂದು ಸ್ವಾಮೀಜಿಗೆ ದೇವರು ಒತ್ತಾಯಪೂರ್ವಕ ದೀರ್ಘಾಯುಷ್ಯ ಕರುಣಿಸಿದ್ದಾನೆ. ಇನ್ನಷ್ಟು ಸುದೀರ್ಘ ಕಾಲ ನಮ್ಮೊಂದಿಗೆ ಇದ್ದು ಪ್ರಪಂಚದ ಅಂಧಕಾರ ತೊಲಗಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 104ನೇ ವರ್ಷದಲ್ಲೂ ಸಿದ್ದಗಂಗಾ ಸ್ವಾಮೀಜಿ ಕ್ರಿಯಾಶೀಲತೆಯನ್ನು ಗಮನಿಸಿದರೆ ದೈವತ್ವದ ಸಂಕೇತದಂತೆ ಕಾಣುತ್ತಾರೆ. ಮಠದ ಕೊಡುಗೆ ಸದಾ ಸ್ಮರಣೀಯ, ಭಕ್ತಿ-ವಿರಕ್ತಿಗಳಿಗೆ ಪ್ರತಿರೂಪದಂತೆ ಇದ್ದಾರೆ ಎಂದು ಸ್ವಾಮೀಜಿ ಸೇವೆಯನ್ನು ನೆನಪು ಮಾಡಿಕೊಂಡರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಾತನಾಡಿ, ’ಡಾ.ಶಿವಕುಮಾರ ಸ್ವಾಮೀಜಿ ತಮ್ಮ ಇಡೀ ಜೀವಮಾನವನ್ನು ಸಮಾಜದ ಉದ್ಧಾರಕ್ಕೆ ಅರ್ಪಿಸಿದ್ದಾರೆ. ಇಡೀ ರಾಷ್ಟ್ರದ ಧಾರ್ಮಿಕ, ನೈತಿಕ ಪ್ರಜ್ಞೆಯ ಪ್ರತೀಕದಂತೆ ಕಂಗೊಳಿಸುತ್ತಿದ್ದಾರೆ. ಧರ್ಮ, ಪಂಥ ಎಂಬ ಯಾವುದೇ ತಾರತಮ್ಯ ಮಾಡದೆ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ದಾಸೋಹ ಕಲ್ಪಿಸಿರುವುದು ಶ್ಲಾಘನೀಯ’ ಎಂದರು.

ಸಂತಾಪ: ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ನಿಧನಕ್ಕೆ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಸಂತಾಪ ವ್ಯಕ್ತಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.