ADVERTISEMENT

ಶಿವಮೊಗ್ಗ: ಬಿಜೆಪಿಗೆ ಪ್ರಯಾಸದ ಗೆಲುವು- ಜೆಡಿಎಸ್‌ಗೆ ತೀವ್ರ ಮುಖಭಂಗ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 6:50 IST
Last Updated 5 ಜನವರಿ 2011, 6:50 IST



ಶಿವಮೊಗ್ಗ: ಬಿಜೆಪಿಯ ಶಕ್ತಿಕೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪ್ರಯಾಸದ ಗೆಲುವು ಕಂಡಿದೆ. ಗುಂಪು ಗಾರಿಕೆ, ಪ್ರಚಾರದ ಕೊರತೆಯ ನಡುವೆಯೂ ಕಾಂಗ್ರೆಸ್ ಸಮಾಧಾನ ಪಟ್ಟುಕೊಂಡಿದೆ. ಬಂಗಾರಪ್ಪ ಸೇರ್ಪಡೆ, ಕುಮಾರಸ್ವಾಮಿ ಓಡಾಟದ ಮಧ್ಯೆಯೂ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ.

ಶಿಕಾರಿಪುರದ ಐದು ಕ್ಷೇತ್ರಗಳಲ್ಲಿ ಬಿಜೆಪಿ ನಾಲ್ಕರಲ್ಲಿ ಗೆಲುವು ಸಾಧಿ ಸಿದ್ದರೂ, ಕಪ್ಪನಹಳ್ಳಿಯಲ್ಲಿ ಗೆಲ್ಲಲು ಪ್ರಯಾಸ ಪಟ್ಟಿದೆ. ಸೋತ ಕ್ಷೇತ್ರಗಳಿಗೆ ಕಾಲಿಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಕಾಂಗ್ರೆಸ್ ಗೆಲುವು ಕಂಡ ಈಸೂರಿಗೆ ಕಾಲಿಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಹುಟ್ಟಿಸಿದೆ.

ಸೊರಬದಲ್ಲಿ ಇಬ್ಬರ ಜಗಳದಲ್ಲಿ ಗೆಲುವು ಮೂರನೆಯವರ ಪಾಲಾಗಿದೆ. ಅಲ್ಲಿ ಬಿಜೆಪಿ ಐದೂ ಕ್ಷೇತ್ರಗಳನ್ನೂ ತನ್ನದಾಗಿಸಿಕೊಂಡಿದೆ.  ಸೊರಬದಲ್ಲಿ ಶಾಸಕ ಹಾಲಪ್ಪ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆಂಬ ಮಾತುಗಳಿದ್ದರೂ ಬಂಗಾರಪ್ಪ-ಕುಮಾರ ಬಂಗಾರಪ್ಪ ಗುಂಪುಗಳು ಇರುವವರೆಗೂ ಹಾಲಪ್ಪ ಅವರಿಗೆ ಗೆಲುವು ಅನಾಯಾಸವಾಗಿ ಲಭಿಸುತ್ತಿದೆ. ಸಾಗರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳೆರಡೂ ಕಾಂಗ್ರೆಸ್‌ಮಯವಾಗಿವೆ. ಕಾಗೋಡು ತಿಮ್ಮಪ್ಪ ಕಸರತ್ತು, ಬೇಳೂರು ಗೋಪಾಲಕೃಷ್ಣರ ‘ಕಮಾಲ್’ ಕೆಲಸ ಮಾಡಿವೆ.

ಹೊಸನಗರದಲ್ಲಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೆ, ತಾಲ್ಲೂಕು ಪಂಚಾಯ್ತಿಯಲ್ಲಿ ಬಿಜೆಪಿ ಗರಿಷ್ಠ ಸಾಧನೆ ಮಾಡಿದೆ. ಕಾಂಗ್ರೆಸ್‌ನ ಕಲಗೋಡು ರತ್ನಾಕರ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಯಡಿಯೂರಪ್ಪ ಮಾಡಿದ ಪ್ರವಾಸ ಇಲ್ಲಿ ಫಲ ನೀಡಿದೆ.

ತೀರ್ಥಹಳ್ಳಿಯಲ್ಲಿ ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಕಾಂಗ್ರೆಸ್ ಗೆಲುವಿನ ಯಾತ್ರೆ ಮುಂದುವರಿಸಿದೆ. ಆರಗ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ನೆಲೆ ಕಂಡಿದೆ. ಡಿ.ಬಿ. ಚಂದ್ರೇಗೌಡ, ಎಚ್.ಡಿ. ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ಆರ್.ಎಂ. ಮಂಜುನಾಥಗೌಡರ ಆಟಕ್ಕೆ ಇಲ್ಲಿ ಬೆಲೆ ಸಿಕ್ಕಿಲ್ಲ.

ಭದ್ರಾವತಿಯಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆದರೆ, ತಾಲ್ಲೂಕು ಪಂಚಾಯ್ತಿಯಲ್ಲಿ ಅತಂತ್ರ ಸ್ಥಿತಿ ಇದೆ. ಹಿರಿಯೂರಿನಲ್ಲಿ ಜೆಡಿಎಸ್‌ನ ಎಸ್. ಕುಮಾರ್ ಹಣಿಯಲು ಕಾಂಗ್ರೆಸ್, ಬಿಜೆಪಿ ಒಟ್ಟಾಗಿ ಸೇರಿ ಮಾಡಿದ ಪ್ರಯತ್ನ ಕೈಗೂಡಲಿಲ್ಲ. ಹೊಳೆಹೊನ್ನೂರಿನಲ್ಲಿ ಅದ್ದೂರಿ ಚುನಾವಣಾ ಪ್ರಚಾರ ಮಾಡಿದ ಹಾಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ ಅವರಿಗೆ ಬಹುಅಂತರದ ಸೋಲಾಗಿದೆ.  ಸ್ವತಃ ಮುಖ್ಯಮಂತ್ರಿಗಳು ಎರಡೆರಡು ಬಾರಿ ಮಾಡಿದ ಬಿರುಸಿನ ಪ್ರಚಾರ ಬಿಜೆಪಿಗೆ ಮಾನ ಉಳಿಸಿದ್ದರೆ, ಯಾವುದೇ ನಾಯಕರು ಪ್ರಚಾರ ಮಾಡದೆ ಕಾಂಗ್ರೆಸ್ ಗೆದ್ದಿದೆ. ಎಚ್.ಡಿ. ಕುಮಾರಸ್ವಾಮಿ ಪ್ರವಾಸ, ಬಂಗಾರಪ್ಪ ವರ್ಚಸ್ಸು ಜೆಡಿಎಸ್‌ಗೆ ಹೆಚ್ಚಿನ ಮತಗಳನ್ನು ತಂದುಕೊಟ್ಟರೂ ಗೆಲುವಿನ ಗೆರೆ ದಾಟಿಸುವಲ್ಲಿ ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.