ಬೆಂಗಳೂರು: 2010-2011ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜೀವಮಾನದ ಸಾಧನೆಗಾಗಿ ನಟ ಎಸ್.ಶಿವರಾಂ ಅವರಿಗೆ ಡಾ. ರಾಜಕುಮಾರ್ ಪ್ರಶಸ್ತಿ, ನಿರ್ದೇಶಕ ಭಾರ್ಗವ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಲಾಗಿದೆ. ವಿಷ್ಣುವರ್ಧನ್ ಪ್ರಶಸ್ತಿಗೆ ನಟ ಅಂಬರೀಷ್ ಆಯ್ಕೆಯಾಗಿದ್ದಾರೆ.
ಆಯ್ಕೆ ಸಮಿತಿ ಅಧ್ಯಕ್ಷೆ ನಟಿ ಭಾರತಿ ವಿಷ್ಣುವರ್ಧನ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನಗರದಲ್ಲಿ ಗುರುವಾರ ಪ್ರಶಸ್ತಿಗಳನ್ನು ಪ್ರಕಟಿಸಿದರು.
ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ರಾಕ್‌ಲೈನ್ ಪ್ರೊಡಕ್ಷನ್ಸ್ ನಿರ್ಮಾಣದ, ಉಪೇಂದ್ರ ನಿರ್ದೇಶನದ `ಸೂಪರ್~ ಚಿತ್ರ ಆಯ್ಕೆಯಾಗಿದೆ. ಹಂಸಲೇಖ ಇಮೇಜಸ್ ಪ್ರೈ. ಲಿಮಿಟೆಡ್‌ನ ಕೆ.ಕೆ.ಶಿವರುದ್ರಯ್ಯ ನಿರ್ದೇಶನದ `ಭಗವತಿ ಕಾಡು~ ಚಿತ್ರಕ್ಕೆ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ರೇಣು ಡಿಜಿಟಲ್ ಸ್ಟುಡಿಯೊ ನಿರ್ಮಾಣದ ನಿರ್ದೇಶಕ ರೇಣುಕುಮಾರ್ ಅವರ ಶಬ್ದಮಣಿ ಚಿತ್ರಕ್ಕೆ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಂದಿದೆ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಶ್ರೀನಿವಾಸ್ ಕೌಶಿಕ್ ನಿರ್ದೇಶನದ `ತರಂಗಿಣಿ~. ಅತ್ಯುತ್ತಮ ಮಕ್ಕಳ ಚಿತ್ರ ಸಿ.ಲಕ್ಷ್ಮಣ್ ನಿರ್ದೇಶನದ `ನನ್ನ ಗೋಪಾಲ~.
ಅತ್ಯುತ್ತಮ ನಟ ಪ್ರಶಸ್ತಿಗೆ ಪುನೀತ್ ರಾಜ್‌ಕುಮಾರ್ (ಚಿತ್ರ: ಪೃಥ್ವಿ), ಅತ್ಯುತ್ತಮ ನಟಿ ಪ್ರಶಸ್ತಿಗೆ ಕಲ್ಯಾಣಿ (ಚಿತ್ರ: ಸೂಸೈಡ್) ಅವರನ್ನು ಆಯ್ಕೆಮಾಡಲಾಗಿದೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ರಮೇಶ್ ಭಟ್ (ಚಿತ್ರ ಉಯ್ಯಾಲೆ),ಅತುತ್ತಮ ಪೋಷಕ ನಟಿ ಪ್ರಶಸ್ತಿಗೆ ವಿಜಯಲಕ್ಷ್ಮಿ ಸಿಂಗ್ (ಚಿತ್ರ: ವೀರ ಪರಂಪರೆ) ಪಾತ್ರರಾಗಿದ್ದಾರೆ.
`ಒಟ್ಟು 52 ಚಿತ್ರಗಳು ಕಣದಲ್ಲಿದ್ದವು. ಸಮಿತಿ ಒಟ್ಟು 30 ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪುಟ್ಟಣ್ಣ, ರಾಜ್‌ಕುಮಾರ್ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ 2 ಲಕ್ಷ ನಗದು ಹಾಗೂ ಚಿನ್ನಲೇಪಿತ ಫಲಕ ನೀಡಿ ಗೌರವಿಸಲಾಗುವುದು.
ಸಬ್ಸಿಡಿ ವಿವಾದಕ್ಕೆ ತೆರೆ |
`2009-10ನೇ ಸಾಲಿನ ಸಬ್ಸಿಡಿ ಆಯ್ಕೆ ಸಮಿತಿ ಸೂಚಿಸಿರುವ ಚಲನಚಿತ್ರಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು. `ಆಯ್ಕೆ ಸಮಿತಿ ನಿರ್ಧಾರ ಸೂಕ್ತವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಶೀಘ್ರದಲ್ಲಿಯೇ ಪಟ್ಟಿಯನ್ನು ಪ್ರಕಟಿಸಲಾಗುವುದು~ ಎಂದರು. ಸಬ್ಸಿಡಿ ಸಮಿತಿಯ ಕೆಲವು ಸದಸ್ಯರು ಲಂಚ ಸ್ವೀಕರಿಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿವಾದ ಉಂಟಾಗಿತ್ತು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಅವರು, `ತುರ್ತಾಗಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಬೇಕಿದೆ~ ಎಂದು ತಿಳಿಸಿ ಸುದ್ದಿಗೋಷ್ಠಿಯಿಂದ ಹೊರನಡೆದರು. |
ಪ್ರಥಮ ಅತ್ಯುತ್ತಮ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ ರೂ 1 ಲಕ್ಷ ನಗದು, ತಲಾ 50 ಗ್ರಾಂ ಚಿನ್ನದ ಪದಕ, 2ನೇ ಅತ್ಯುತ್ತಮ ಚಿತ್ರದ ನಿರ್ಮಾಪಕ ನಿರ್ದೇಶಕರಿಗೆ ತಲಾ ರೂ 75,000 ನಗದು, ತಲಾ 100 ಗ್ರಾಂ ಬೆಳ್ಳಿ ಪದಕ ಹಾಗೂ 3ನೇ ಅತ್ಯುತ್ತಮ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ರೂ 50,000 ನಗದು ಮತ್ತು ತಲಾ 100 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುವುದು~ ಎಂದು ಮುಖ್ಯಮಂತ್ರಿ ತಿಳಿಸಿದರು.
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ ರೂ 75 ಸಾವಿರ ನಗದು ಹಾಗೂ 50 ಗ್ರಾಂ ಚಿನ್ನದ ಪದಕ, ಅತ್ಯುತ್ತಮ ಮಕ್ಕಳ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ ರೂ 50 ಸಾವಿರ ನಗದು ಹಾಗೂ ನೂರು ಗ್ರಾಂ ಬೆಳ್ಳಿಯ ಪದಕ ನೀಡಲಾಗುತ್ತದೆ. ಎಲ್ಲಾ ಪ್ರಶಸ್ತಿಗಳು ಫಲಕವನ್ನು ಒಳಗೊಂಡಿವೆ.
ಸ್ಪರ್ಧೆಗೆ ಬರುವ ಚಿತ್ರಗಳ ರೀಲ್‌ಗಳನ್ನು ಮಾತ್ರ ಸರ್ಕಾರ ಪ್ರಶಸ್ತಿ ಆಯ್ಕೆಗೆ ಪರಿಗಣಿಸುತ್ತಿದ್ದು ಡಿಜಿಟಲ್ ಪ್ರತಿಗಳನ್ನು ಸ್ವೀಕರಿಸುವಂತೆ ನಿಯಮಗಳನ್ನು ಬದಲಿಸಬೇಕಿದೆ. ಧ್ವನಿಗ್ರಹಣ ಪ್ರಶಸ್ತಿಗೆ ಆಯ್ಕೆ ಮಾಡು ವಾಗ ಲೈವ್ ಧ್ವನಿ ಗ್ರಾಹಕರನ್ನೂ ಪರಿಗಣಿಸಬೇಕು. ವಸ್ತ್ರ ವಿನ್ಯಾಸಕ, ಖಳನಟ ಹಾಗೂ ನೃತ್ಯ ನಿರ್ದೇಶಕ ಪ್ರಶಸ್ತಿಗಳನ್ನು ಕೂಡ ಅಸ್ತಿತ್ವಕ್ಕೆ ತರಬೇಕು ಎಂದು ಸಮಿತಿ ಶಿಫಾರಸು ಮಾ ಡಿದೆ.
ಸಮಿತಿಯ ಸದಸ್ಯರಾಗಿ ಅಶೋಕ್ ಕಶ್ಯಪ್, ಬೂದಾಳ್ ಕೃಷ್ಣಮೂರ್ತಿ, ಬಿ.ಎಂ. ಹನೀಫ್, ವೈ.ಆರ್. ಅಶ್ವತ್ಥ್, ಪಿಚ್ಚಳ್ಳಿ ಶ್ರೀನಿವಾಸ್, ಹೇಮಾ ಚೌಧರಿ, ಸುನಿಲ್ ಪುರಾಣಿಕ್, ಈಶ್ವರ ದೈತೋಟ ಹಾಗೂ ಸದಸ್ಯ ಕಾಯದರ್ಶಿಯಾಗಿ ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್. ಬೇವಿನಮರದ ಕಾರ್ಯ ನಿರ್ವಹಿಸಿದ್ದರು.
ಸುದ್ದಿಗೋಷ್ಠಿಯಲ್ಲೇ ಪ್ರಶಸ್ತಿ
ಪಟ್ಟಿಯಲ್ಲಿ ಸದಾಶಿವ ಶೆಣೈ ಅವರ `ಪ್ರಾರ್ಥನೆ~ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ದೊರೆತಿರುವ ಉಲ್ಲೇಖವಿದೆ. ಆದರೆ, `ಜಯಹೇ~ ಚಿತ್ರದ ನಾಯಕಿ ಆಯೇಷಾ ಹೆಸರು ಸುದ್ದಿಗೋಷ್ಠಿಯ್ಲ್ಲಲಿ ಸೇರಿಕೊಂಡಿತು.
ಪ್ರಶಸ್ತಿಗಳ ಒಟ್ಟು ಸಂಖ್ಯೆ 29 ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು. ಆಗ, ಮಧ್ಯಪ್ರವೇಶಿಸಿದ ಆಯ್ಕೆ ಸಮಿತಿ ಅಧ್ಯಕ್ಷೆ ಭಾರತಿ ಅವರು ಆಯೇಷಾ ಅವರ ಹೆಸರನ್ನು 30ನೇ ಪ್ರಶಸ್ತಿಯಾಗಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.