ADVERTISEMENT

ಶೀಘ್ರ ನೂತನ ನಿರ್ದೇಶಕರ ನೇಮಕ

ರಂಗ ಸಮಾಜದಿಂದ ಸಂಭವನೀಯರ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 20:02 IST
Last Updated 10 ಜನವರಿ 2014, 20:02 IST

ಧಾರವಾಡ: ಆರು ತಿಂಗಳಿಂದ ಖಾಲಿ ಇರುವ ಧಾರವಾಡ, ಶಿವಮೊಗ್ಗ ಹಾಗೂ ಆರಂಭಗೊಳ್ಳಲಿರುವ ಗುಲ್ಬರ್ಗ ರಂಗಾಯಣ ಘಟಕಗಳಿಗೆ ಸಂಭವನೀಯ ನಿರ್ದೇಶಕರ ಪಟ್ಟಿಯನ್ನು ‘ರಂಗ­ಸಮಾಜ’ವು ಸಿದ್ಧಪಡಿಸಿದ್ದು ಇದೇ  7­ರಂದು ಸರ್ಕಾರಕ್ಕೆ ಸಲ್ಲಿಸಿದೆ. ವಾರದ ಒಳಗೆ ಈ ಮೂರೂ ರಂಗಾಯಣ ಘಟಕಗಳಿಗೆ ನಿರ್ದೇಶಕರ ನೇಮಕ­ವಾಗುವ ಸಂಭವವಿದೆ.

ಧಾರವಾಡ ರಂಗಾಯಣಕ್ಕೆ ಮೂವರ ಹೆಸರು, ಶಿವಮೊಗ್ಗ ಹಾಗೂ ಗುಲ್ಬರ್ಗ ಘಟಕಗಳಿಗೆ ತಲಾ ನಾಲ್ಕು ಮಂದಿ ಹೆಸರುಗಳನ್ನು ಸೂಚಿಸಲಾಗಿದೆ.

ಹಿರಿಯ ರಂಗ ಕಲಾವಿದರಾದ ಗೋಪಾಲ­ಕೃಷ್ಣ ನಾಯರಿ, ಪ್ರಕಾಶ ಗರೂಡ ಹಾಗೂ ರಂಗಕರ್ಮಿ ವಿಠ್ಠಲ ಕೊಪ್ಪದ ಹೆಸರುಗಳನ್ನು ಸುಭಾಸ ನರೇಂದ್ರ ಅವರಿಂದ ತೆರವಾದ ಧಾರ­ವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಸೂಚಿಸಿದ್ದರೆ ಹೊ.ನ.ಸತ್ಯ ಅವರಿಂದ ತೆರವಾದ ಶಿವಮೊಗ್ಗ ರಂಗಾಯಣಕ್ಕೆ ಇಕ್ಬಾಲ್‌ ಅಹಮದ್, ಎಸ್‌.ಮಾಲತಿ, ಪ್ರಮೋದ ಶಿಗ್ಗಾಂವ, ಎಂ.ಗಣೇಶ ಅವರನ್ನು ಹೆಸರಿಸಿದೆ. ಗುಲ್ಬರ್ಗ ರಂಗಾ­ಯಣಕ್ಕೆ ಆರ್‌.ಕೆ.­ಹುಡುಗಿ, ಎಲ್‌.ಬಿ.ಕೆ.­ಅಲ್ದಾಳ, ಪ್ರಭಾ­ಕರ ಸಾತಖೇಡ ಹಾಗೂ ಶಂಕ್ರಯ್ಯ ಘಂಟಿ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಂಗಸಮಾಜದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಸ್ತುತ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದು, ಉತ್ಸವ ಮುಗಿದ ಬಳಿಕವೇ ಮೂರು ರಂಗಾಯಣ ಘಟಕಕ್ಕೆ ನೂತನ ನಿರ್ದೇಶಕರ ಆಯ್ಕೆ ನಡೆಯ­ಲಿದೆ. ಒಂದು ವಾರದಲ್ಲಿ ಎಲ್ಲ ಪ್ರಕ್ರಿಯೆ­ಗಳು ಮುಗಿಯಬಹುದು ಎಂದು ತಿಳಿದು­ಬಂದಿದೆ.

ಪ್ರತಿಭಟನೆಯ ಎಚ್ಚರಿಕೆ: ಹಿಂದೆ ಬಿಜೆಪಿ ಸರ್ಕಾರವು ರಂಗಸಮಾಜ ಸೂಚಿಸಿದ ಹೆಸರುಗಳಿಗೆ ಬೆಲೆ ನೀಡದೇ, ತಮಗೆ ಬೇಕಾದವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಿತ್ತು. ಧಾರವಾಡ ರಂಗಾ­ಯಣಕ್ಕೆ ಸುಭಾಸ ನರೇಂದ್ರ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಗೋಪಾಲಕೃಷ್ಣ ನಾಯರಿ, ಗಂಗಾಧರ ಸ್ವಾಮಿ ಹಾಗೂ ಪ್ರಕಾಶ ಗರೂಡ ಕೋರ್ಟ್‌ ಮೆಟ್ಟಿಲು ಏರಿದ್ದರು.  ‘ಸಮಾಜ ಸೂಚಿಸಿದವರನ್ನು ಹೊರತುಪಡಿಸಿ ಬೇರೆಯವರನ್ನು ನೇಮಕ ಮಾಡಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲೂ ನಾವು ಹಿಂಜರಿ­ಯುವುದಿಲ್ಲ’ ಎಂದು ರಂಗ­ಸಮಾಜದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.