ADVERTISEMENT

ಶೀತಲ್ ಚೌಗುಲೆ ಕೊಲೆ ಪ್ರಕರಣ: ಪತಿ ಸೇರಿ ಐವರಿಗೆ ಜೀವಾವಧಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಬೆಳಗಾವಿ: ನಗರದಲ್ಲಿ ಭೀತಿ ಮೂಡಿಸಿದ್ದ ಶೀತಲ್ ಚೌಗುಲೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ರವೀಂದ್ರ ಚೌಗುಲೆ ಹಾಗೂ ಮಹಿಳೆಯೊಬ್ಬಳು ಸೇರಿದಂತೆ ಐವರಿಗೆ ಇಲ್ಲಿನ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಗಣ್ಣ ಪಾಟೀಲ ಮಂಗಳವಾರ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ ರೂ 10,000  ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ರವಿ ಚಾಟೆ, `ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯಂತಹ ಅತಿ ವಿರಳ ಪ್ರಕರಣದ ಅಪರಾಧಿಗಳಿಗೆ ಸಮಾಜದ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅತಿ ಹೆಚ್ಚಿನ ಕಠಿಣ ಶಿಕ್ಷೆ ವಿಧಿಸಬೇಕು

. ಸ್ವಾಮಿ ಶ್ರದ್ಧಾನಂದ ತನ್ನ ಪತ್ನಿಯ ಕೊಲೆ ಮಾಡಿದ ಪ್ರಕರಣದಂತೆ ರವೀಂದ್ರ ಚೌಗುಲೆ ಅವರು ಇಲ್ಲೂ ತಮ್ಮ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂಬುದನ್ನು ಪರಿಗಣಿಸಬೇಕು~ ಎಂದು ಕೋರಿದರು.

ಜನರಿಂದ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಆದೇಶ ಹೊರಡಿಸಿದ ನ್ಯಾಯಾಧೀಶ ಸಂಗಣ್ಣ ಪಾಟೀಲ ಅವರು, ರವೀಂದ್ರ ಚೌಗುಲೆ, ರಂಜಿತ ಶಿಂತ್ರೆ, ವಿಜಯಾನಂದ ಅಲಿಯಾಸ್ ದಿಂಕು ಶಿಂಧೆ, ~ರಾಜದೀಪ ಬಂಗಲೆ~ ಮಾಲೀಕ ರಾಜೇಶ ಮೆಣಸೆ ಹಾಗೂ ರೀನಾ ತಹಸೀಲ್ದಾರ ಅವರಿಗೆ ಶಿಕ್ಷೆ ಪ್ರಕಟಿಸಿದರು.

ಇದಲ್ಲದೇ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೆಲವರಿಗೆ 3 ತಿಂಗಳಿನಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 500 ರೂಪಾಯಿಯಿಂದ 15,000 ರೂಪಾಯಿವರೆಗೆ ದಂಡವನ್ನೂ ವಿಧಿಸಿದರು. ಈ ಎಲ್ಲ ಶಿಕ್ಷೆಗಳೂ ಒಂದೇ ಸಮಯದಲ್ಲಿ ಜಾರಿಯಾಗಲಿದೆ.

ಆಗಸ್ಟ್ 11, 2007ರಂದು ನಗರದ `ರಾಜದೀಪ ಬಂಗಲೆ~ಯಲ್ಲಿ ಶೀತಲ್ ಚೌಗುಲೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಗಸ್ಟ್ 12ರಂದು ಕೊಲೆ ಮಾಡಿ, ಖಾನಾಪುರದ ಬಳಿಯ ನಾಲೆಯೊಂದರಲ್ಲಿ ಶವವನ್ನು ಎಸೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.