ADVERTISEMENT

ಶೆಟ್ಟರ ಸರ್ಕಾರ ಬೀಳಿಸುವ ಉದ್ದೇಶವಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2013, 12:56 IST
Last Updated 28 ಜನವರಿ 2013, 12:56 IST
ಶೆಟ್ಟರ ಸರ್ಕಾರ ಬೀಳಿಸುವ ಉದ್ದೇಶವಿಲ್ಲ: ಯಡಿಯೂರಪ್ಪ
ಶೆಟ್ಟರ ಸರ್ಕಾರ ಬೀಳಿಸುವ ಉದ್ದೇಶವಿಲ್ಲ: ಯಡಿಯೂರಪ್ಪ   

ಬೆಂಗಳೂರು (ಪಿಟಿಐ):ತಮಗೆ ನಿಷ್ಠರಾದ 13 ಮಂದಿ ಬಿಜೆಪಿ ಶಾಸಕರು ತಮ್ಮ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ ದಿನಗಳ ಬಳಿಕ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಮುಖ್ಯಸ್ಥ ಬಿ.ಎಸ್. ಯಡಿಯೂರಪ್ಪ ಅವರು ಜಗದೀಶ ಶೆಟ್ಟರ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೀಳಿಸುವ ಉದ್ದೇಶ ತನಗಿಲ್ಲ, ಫೆಬ್ರುವರಿ 8ರಂದು ಮುಂಗಡಪತ್ರ ಮಂಡಿಸುವುದಕ್ಕೂ ವಿರೋಧವೇನಿಲ್ಲ ಎಂದು ಹೇಳಿದರು.

'ನಮ್ಮ ಗುರಿ ಸರ್ಕಾರವನ್ನು ಉರುಳಿಸುವುದಲ್ಲ' ಎಂದು ಸುಮಾರು ಎರಡು ತಿಂಗಳುಗಳ ಹಿಂದೆ ಬಿಜೆಪಿ ತ್ಯಜಿಸಿದ ಯಡಿಯೂರಪ್ಪ ನುಡಿದರು.

ಸರ್ಕಾರವನ್ನು ಉರುಳಿಸಬಯಸಿದ್ದರೆ ಡಿಸೆಂಬರ್ 9ರಂದೇ ಶಾಸಕರನ್ನು ಸೇರಿಸಿ ಆ ಕೆಲಸ ಮಾಡುತ್ತಿದ್ದೆ ಎಂದು ಅವರು ನುಡಿದರು.

13 ಶಾಸಕರು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ ಬಗ್ಗೆ ಪ್ರಸ್ತಾಪಿಸಿದ ಅವರು, ಚುನಾವಣೆ ಶೀಘ್ರವಾಗಿ ಹತ್ತಿರ ಬರುತ್ತಿರುವುದರಿಂದ ಪಕ್ಷವನ್ನು ಬಲಗೊಳಿಸುವ ಸಲುವಾಗಿ ಅವರೆಲ್ಲರೂ ಕೆಜೆಪಿ ಸೇರುತ್ತಿದ್ದಾರೆ. ಈ ಶಾಸಕರ ಉದ್ದೇಶ ಸರ್ಕಾರವನ್ನು ಬೀಳಿಸುವುದಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಮುಂಗಡಪತ್ರ ಮಂಡಿಸದಂತೆ ಶೆಟ್ಟರ ಅವರನ್ನು ತಡೆಯುವ ಸಲುವಾಗಿ ಯಡಿಯೂರಪ್ಪ ಅವರು ಶಾಸಕರನ್ನು ಸೆಳಯುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಜೆಪಿ ಮುಖ್ಯಸ್ಥ 'ಮುಂಗಡಪತ್ರ ಮಂಡನೆಯನ್ನು ವಿರೋಧಿಸಬಯಸಿದ್ದರೆ, ನಾನು ಒಂದೇ ಸಲಕ್ಕೆ 20 ಶಾಸಕರ ರಾಜೀನಾಮೆ ಕೊಡಿಸುತ್ತಿದ್ದೆ. ನಮಗೆ ಅಂತಹ ಉದ್ದೇಶವಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT