ADVERTISEMENT

ಶೇ 30ರಷ್ಟು ಶುಲ್ಕ ಹೆಚ್ಚಳಕ್ಕೆ ಒಪ್ಪದ ಸಿಎಂ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಶುಲ್ಕವನ್ನು ಶೇ 30ರಷ್ಟು ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಅವರು, ‘ಮೂರು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡಲಾಗಿಲ್ಲ ಎಂಬ ಕಾರಣಕ್ಕೆ, ಒಮ್ಮೆಲೆ ಶೇ 30ರಷ್ಟು ಹೆಚ್ಚಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೊಂದರೆ ನೀಡಲು ನಾನು ಒಪ್ಪುವುದಿಲ್ಲ’ ಎಂದರು.

‘ಹೊಸ ಸರ್ಕಾರ ಈಗಷ್ಟೇ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ನೀವೇ ಯೋಚಿಸಿ ಒಂದು ತೀರ್ಮಾನಕ್ಕೆ ಬನ್ನಿ. ಎಷ್ಟು ಶುಲ್ಕ ಹೆಚ್ಚಿಸಬೇಕು ಎಂಬ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಚರ್ಚಿಸಿ ವಾರದೊಳಗೆ ಅಂತಿಮ ವರದಿ ಕೊಡಿ. ಅದನ್ನು ಪರಿಶೀಲಿಸಿ, ನನ್ನ ಅಭಿಪ್ರಾಯ ಹೇಳುತ್ತೇನೆ’ ಎಂದೂ ಹೇಳಿದರು.

ADVERTISEMENT

‘2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಲೇಜುಗಳ ಆಡಳಿತ ಮಂಡಳಿ ಜತೆ ಕೆಲ ಒಪ್ಪಂದವಾಗಿತ್ತು. ಪ್ರತಿ ವರ್ಷ ಶೇ 8ರಷ್ಟು ಮಾತ್ರ ಶುಲ್ಕ ಹೆಚ್ಚಿಸಬಹುದು ಎಂದು ಹೇಳಲಾಗಿತ್ತು. ಈಗ ಆ ಒಪ್ಪಂದದಂತೆಯೇ ಮುಂದುವರಿಯುವುದು ಸೂಕ್ತ’ ಎಂದರು.

‘ನ್ಯಾ.ಡಿ.ವಿ.ಶೈಲೇಂದ್ರ ಕುಮಾರ್ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಕೊಟ್ಟಿಲ್ಲ. ಕೆಲ ಕಾಲೇಜುಗಳಿಗೇ ನೇರವಾಗಿ ಕೊಟ್ಟಿದೆ. ಒಂದು ವೇಳೆ ಸಮಿತಿಯ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡುವಂತೆ ಒತ್ತಾಯಿಸಿ ಕಾಲೇಜು ಆಡಳಿತ ಮಂಡಳಿಗಳು ನ್ಯಾಯಾಲಯದ ಮೊರೆ ಹೋದರೆ, ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ಕೂಡ ಕಾನೂನು ಹೋರಾಟ ನಡೆಸುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಪಾಂಡುರಂಗ ಶೆಟ್ಟಿ, ‘ಮೂರು ವರ್ಷಗಳ ಹಿಂದೆ ಶೇ 5ರಷ್ಟು ಮಾತ್ರ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಆ ನಂತರ ಹೆಚ್ಚಳ ಮಾಡಿಯೇ ಇಲ್ಲ. ಸರ್ಕಾರಿ ನೌಕರರ ಸಂಬಳ ಜಾಸ್ತಿ ಮಾಡಿರುವ ಮಾದರಿಯಲ್ಲೇ, ಕಾಲೇಜು ಉಪನ್ಯಾಸಕರು ಹಾಗೂ ನೌಕರರ ವೇತನ ಹೆಚ್ಚಿಸಿದ್ದೇವೆ. ಈ ಕಾರಣಗಳಿಂದ ನಾವು ಭಾರೀ ನಷ್ಟದಲ್ಲಿದ್ದೇವೆ. ಶೇ 30ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ನಾವು ಹಿಂಪಡೆಯುವುದಿಲ್ಲ’ ಎಂದರು.

ಧಾರ್ಮಿಕ ಮತ್ತು ಭಾಷಾವಾರು ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘದ ಕಾರ್ಯದರ್ಶಿ ಶಫಿ ಅಹಮದ್, ‘ಕಾಲೇಜುಗಳ ಖರ್ಚು–ವೆಚ್ಚ ಸರಿದೂಗಿಸಲು ಶೇ 30ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದೇವೆ. ಕನಿಷ್ಠ ಶೇ 15ರಷ್ಟಾದರೂ ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಭೆಗೆ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.