ADVERTISEMENT

ಶೇ 50ರಷ್ಟು ಸೀಟು ಬಿಟ್ಟುಕೊಡಲು ಕೋರಿಕೆ

ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜು ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:29 IST
Last Updated 10 ಮೇ 2018, 20:29 IST
ಶೇ 50ರಷ್ಟು ಸೀಟು ಬಿಟ್ಟುಕೊಡಲು ಕೋರಿಕೆ
ಶೇ 50ರಷ್ಟು ಸೀಟು ಬಿಟ್ಟುಕೊಡಲು ಕೋರಿಕೆ   

ಬೆಂಗಳೂರು: ‘ವೈದ್ಯಕೀಯ ಪದವಿ ಸೀಟು ಹಂಚಿಕೆಗೆ ಸಂಬಂಧಿಸಿದ ಸ್ನಾತಕೋತ್ತರ ವೈದ್ಯ ಶಿಕ್ಷಣ (ತಿದ್ದುಪಡಿ) ನಿಯಮ–2018 ಅನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಮತ್ತು ಆ ಪ್ರಕಾರ ಶೇ 50ರಷ್ಟು ಸೀಟುಗಳನ್ನು ನಮಗೆ ಬಿಟ್ಟುಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ಹೈಕೋರ್ಟ್ ಮೆಟ್ಟಿಲೇರಿವೆ.

ಈ ಸಂಬಂಧ, ಕರ್ನಾಟಕದಲ್ಲಿನ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟದ ಅಧ್ಯಕ್ಷೆ ಡಿ.ಎ.ಕಲ್ಪಜಾ, ಬೆಂಗಳೂರಿನ ರಾಜರಾಜೇಶ್ವರಿ ಮತ್ತು ವೈದೇಹಿ ವೈದ್ಯಕೀಯ ಕಾಲೇಜುಗಳು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರಕರಣದ ಪ್ರತಿವಾದಿಗಳಾದ ಕೇಂದ್ರ ಆರೋಗ್ಯ ಸಚಿವಾಲಯ, ರಾಜ್ಯದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ADVERTISEMENT

‘ಒಪ್ಪಂದದ ಅನುಸಾರ ಪರೀಕ್ಷಾ ಪ್ರಾಧಿಕಾರ ಮಾಡುವ ಸೀಟು ಹಂಚಿಕೆಯು ಈ ರಿಟ್‌ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದೂ ಆದೇಶಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಕೇಂದ್ರ ಸರ್ಕಾರವು 2018ರಲ್ಲಿ ಹೊರಡಿಸಿರುವ ಹೊಸ ನಿಯಮದಂತೆ ರಾಜ್ಯ ಸರ್ಕಾರ ಶೇ 50ರಷ್ಟು
ಸೀಟುಗಳನ್ನು ಖಾಸಗಿ ವೈದ್ಯ ಕಾಲೇಜುಗಳಿಗೆ ಬಿಟ್ಟುಕೊಡಬೇಕು. ಉಳಿದ ಶೇ 50ರಷ್ಟು ಸೀಟುಗಳನ್ನು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಅನುಸಾರ ಗಿಟ್ಟಿಸಿದವರಿಗೆ ಕೆಇಎ ಮೂಲಕ ಹಂಚಿಕೆ ಮಾಡಬೇಕು. ಆದರೆ ರಾಜ್ಯ ಸರ್ಕಾರ ಶೇ.25ರಷ್ಟು ಸೀಟುಗಳನ್ನು ಮಾತ್ರ ಖಾಸಗಿಯವರಿಗೆ ನೀಡುತ್ತಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

‘ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರವು ಖಾಸಗಿ ವೈದ್ಯ ಕಾಲೇಜುಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಇದರ ಅನುಸಾರ ಅನಿವಾಸಿ ಭಾರತೀಯ ಕೋಟಾದಡಿ ಶೇ 15 ಮತ್ತು ಶೇ 10ರಷ್ಟು ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಕಾಲೇಜುಗಳಿಗೆ ಅವಕಾಶ ನೀಡುತ್ತಿದೆ. ಇನ್ನುಳಿದ ಶೇ 75ರಷ್ಟು ಸೀಟುಗಳನ್ನು ಸರ್ಕಾರವೇ ಪಡೆದುಕೊಳ್ಳುತ್ತಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಸರ್ಕಾರ ಭರ್ತಿ ಮಾಡುವ ಸೀಟುಗಳಿಗೆ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ಮೂಲಸೌಕರ್ಯ ಕಲ್ಪಿಸುವುದು ಕಷ್ಟ. ಆದ್ದರಿಂದ ಹೊಸ ನಿಯಮದಂತೆ ಶೇ 50ರಷ್ಟು ಸೀಟುಗಳನ್ನು ಖಾಸಗಿ ವೈದ್ಯ ಕಾಲೇಜುಗಳಿಗೆ ಬಿಟ್ಟುಕೊಡಲು ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿದಾರರ ಪರ ವಕೀಲ ಆರ್.ಸುಬ್ರಹ್ಮಣ್ಯ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.