ADVERTISEMENT

ಶ್ರಮಕ್ಕೆ ಫಲ: ತುಂಬಿ ತುಳುಕಿದ ವರಕೇರಿ ಬಾವಿ

ಚಿತ್ತವಾಡ್ಗಿಯ ಸಾರ್ವಜನಿಕ ಬಾವಿಯಲ್ಲಿ 15–20 ಅಡಿಯಷ್ಟು ತುಂಬಿದ್ದ ಹೂಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಹೊಸಪೇಟೆ ಚಿತ್ತವಾಡ್ಗಿಯ ವರಕೇರಿ ಬಾವಿಯಿಂದ ಏಪ್ರಿಲ್‌ನಲ್ಲಿ ಹೂಳು ತೆಗೆದ ಸಂದರ್ಭ
ಹೊಸಪೇಟೆ ಚಿತ್ತವಾಡ್ಗಿಯ ವರಕೇರಿ ಬಾವಿಯಿಂದ ಏಪ್ರಿಲ್‌ನಲ್ಲಿ ಹೂಳು ತೆಗೆದ ಸಂದರ್ಭ   

ಹೊಸಪೇಟೆ: ಸ್ಥಳೀಯ ಯುವಕರ ಪರಿಶ್ರಮದ ಫಲವಾಗಿ ನಗರದ ಚಿತ್ತವಾಡ್ಗಿಯ ವರಕೇರಿಯ ಸಾರ್ವಜನಿಕ ಬಾವಿ ನೀರಿನಿಂದ ತುಂಬಿ ತುಳುಕುತ್ತಿದೆ. ಅಂದಾಜು 150 ವರ್ಷಗಳಷ್ಟು ಹಳೆಯದಾದ, ಎರಡು ತಿಂಗಳ ಹಿಂದಷ್ಟೇ ಯಾರಿಗೂ ಬೇಡವಾಗಿದ್ದ, ಹೂಳು– ಗಲೀಜಿನಿಂದ ತುಂಬಿದ್ದ ಈ ಬಾವಿಯು ಸ್ಥಳೀಯರ ಪಾಲಿಗೆ ಕಾಮಧೇನು ಎನಿಸುವಲ್ಲಿ ಯುವಕರ ತಂಡವೊಂದರ  ಶ್ರಮವಿದೆ.

ಸ್ಥಳೀಯ ಹಿರಿಯರು ಹೇಳುವ ಪ್ರಕಾರ, 35ರಿಂದ 40 ಅಡಿಗಳಷ್ಟು ಆಳವಿರುವ ಈ ಬಾವಿಯನ್ನು ಕಟ್ಟಿದಾಗಿನಿಂದಲೂ ಸ್ವಚ್ಛಗೊಳಿಸಿರಲಿಲ್ಲ. ಇದರಿಂದಾಗಿ ಅದರಲ್ಲಿ 15ರಿಂದ 20 ಅಡಿಗಳಷ್ಟು ಹೂಳು ತುಂಬಿಕೊಂಡಿತ್ತು. ಹೂಳಿನ ಪ್ರಮಾಣ ಹೆಚ್ಚಾಗುತ್ತ ಹೋದಂತೆ ನೀರು ಕಡಿಮೆಯಾಯಿತು. ಪ್ರತೀ  ಬೇಸಿಗೆ ಕೊನೆಯಲ್ಲಿ ಬಾವಿ ಸಂಪೂರ್ಣ ಬತ್ತಿ ಹೋಗುತ್ತಿತ್ತು. ಮಳೆಗಾಲದವರೆಗೆ ಸ್ಥಳೀಯರು ಹೇಗೋ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.

ಆದರೆ, ಸತತ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ, ಈ ಸಲದ ಬೇಸಿಗೆಯಲ್ಲಿ ನೀರಿನ ಮೂಲಗಳೆಲ್ಲ ಬತ್ತಿಹೋಗಿದ್ದವು. ವರಕೇರಿ ಬಾವಿ ಕೂಡ ಸಂಪೂರ್ಣ ಬತ್ತಿ ದುರ್ನಾತ ಬೀರುತ್ತಿತ್ತು. ಇದರಿಂದಾಗಿ ಇಡೀ ವರಕೇರಿಯಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಹಣ ಪಾವತಿಸಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

ಪರಿಸ್ಥಿತಿಯ ಗಂಭೀರತೆಯನ್ನು ಅರಿತ  ಸ್ಥಳೀಯ ನಗರಸಭೆ ಸದಸ್ಯ ಎ.ಬಸವರಾಜ ಹಾಗೂ ಸ್ಥಳೀಯ ಯುವಕರು ಸಭೆ ಸೇರಿ, ಬಾವಿಯನ್ನು ಜೀರ್ಣೋದ್ಧಾರಗೊಳಿಸಲು ಪಣತೊಟ್ಟರು. ಏಪ್ರಿಲ್‌ 2ರ ಭಾನುವಾರ, ಅಂದಾಜು 40 ಯುವಕರು ಬೆಳಿಗ್ಗೆಯೇ ಬಾವಿಯ ಬಳಿ ಜಮಾಯಿಸಿದರು.  ಹೂಳು ತೆಗೆಯಲಿಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಬಸವರಾಜ ಪೂರೈಸಿದರೆ, ಅವುಗಳನ್ನು ಹಿಡಿದು ಬಾವಿಯನ್ನು ಹಸನು ಮಾಡುವ ಕೆಲಸಕ್ಕೆ ತಂಡ ನಿಂತಿತು. ಒಂದೇ ದಿನದಲ್ಲಿ ಸುಮಾರು 12 ಅಡಿ ಹೂಳನ್ನು ಮೇಲಕ್ಕೆ ತೆಗೆದು ಬೇರೆಡೆ ಸಾಗಿಸಿದರು. ಮರುದಿನ ಬೆಳಿಗ್ಗೆ ಎಂಟರಿಂದ 11ರ ವರೆಗೆ ಕೆಲಸ ನಿರ್ವಹಿಸಿ ಮತ್ತೆ ಮೂರಡಿ ಹೂಳು ತೆಗೆದರು. ಹೀಗೇ ಅತ್ಯಲ್ಪ ಅವಧಿಯಲ್ಲಿ  15 ಅಡಿ ಹೂಳನ್ನು ಹೊರಹಾಕಿದ್ದರಿಂದ ಬಾವಿ ಸ್ವಚ್ಛಗೊಂಡಿತು.  ಇತ್ತೀಚೆಗೆ ಸುರಿದ ಅಲ್ಪ ಮಳೆಗೇ ಬಾವಿಯಲ್ಲಿ ನೀರು ಬಂದಿದೆ.

‘ವರಕೇರಿಯಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ಇದ್ದಾರೆ. ಕೆಲವೇ  ಮನೆಗಳಿಗೆ ನಗರಸಭೆ ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಇಲ್ಲಿಯ ಜನ ಮೊದಲಿನಿಂದಲೂ ಕುಡಿಯಲು ಹಾಗೂ ಬಳಕೆಗೆ ಬಾವಿಯ ನೀರಿನ್ನೇ ಬಳಸುತ್ತಿದ್ದರು.  ಹೂಳು ತೆಗೆಯುವ ಬಗ್ಗೆ  ಅಧಿಕಾರಿಗಳಿಗೆ ತಿಳಿಸಿದರೆ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಸ್ಥಳೀಯ ಯುವಕರೊಂದಿಗೆ ಸೇರಿಕೊಂಡು ಹೂಳು ತೆಗೆಯಲು ತೀರ್ಮಾನಿಸಿದೆವು’ ಎನ್ನುತ್ತಾರೆ ನಗರಸಭೆ ಸದಸ್ಯ ಎ. ಬಸವರಾಜ.

‘ಸ್ವಲ್ಪ ಮಳೆಗೇ ಬಾವಿಯಲ್ಲಿ ಹತ್ತರಿಂದ ಹನ್ನೆರಡು ಅಡಿ ನೀರು ಬಂದಿದೆ. ಸದ್ಯಕ್ಕಂತೂ ವರಕೇರಿಯಲ್ಲಿ ನೀರಿನ ಸಮಸ್ಯೆಯಿಲ್ಲ’ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.