ಬಸವಕಲ್ಯಾಣ: ಸಮಾನತೆ, ಸಮಬಾಳು ಮತ್ತು ನವ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಮಾಜಿ ಸಚಿವ, ಶಾಸಕರಾದ ಬಿ.ಶ್ರೀರಾಮುಲು ಅವರು ರಾಜ್ಯದಾದ್ಯಂತ ನಡೆಸಲಿರುವ 921 ಕಿ.ಮೀ ಪಾದಯಾತ್ರೆ ಮಂಗಳವಾರ ಇಲ್ಲಿ ಆರಂಭಗೊಂಡಿತು.
ಇಲ್ಲಿನ ರಥ ಮೈದಾನದಲ್ಲಿ ಮಧ್ಯಾಹ್ನ ಶ್ರೀರಾಮುಲು ಪಾಂಚಜನ್ಯ ಊದಿ ಯಾತ್ರೆ ಆರಂಭಿಸಿದರು. ಯಾತ್ರೆ ರಥ ಮೈದಾನದಿಂದ ನಾರಾಯಣಪುರದ ಮೂಲಕ ಹುಮನಾಬಾದ್ ಕಡೆಗೆ ಹೊರಟಿತು. ಅಭಿಮಾನಿಗಳು ಮತ್ತು ಬಿಎಸ್‌ಆರ್ ಪಕ್ಷದ ಕಾರ್ಯಕರ್ತರು ಜೈಕಾರ ಹಾಕುತ್ತ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ರಥ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಶಾಸಕ ವಿದ್ಯಾಧರ ಗುರೂಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಸಂಸತ್ ಸದಸ್ಯರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ, ಶಾಸಕ ಸುರೇಶಬಾಬು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್, ನಟಿ ರಕ್ಷಿತಾ, ಮೃತ್ಯುಂಜಯ ಜಿನಗಾ, ಕೊಲ್ಕತ್ತದ ಅಬುಲ್ ರಹೇಮಾನಿ, ಇತರರು ಯಾತ್ರೆಗೆ ಶುಭ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.