ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್ ಅವರಿಗೆ ಜೆಡಿಎಸ್ ಮೈಸೂರು ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ.
ಷರೀಫ್ ಕಣಕ್ಕೆ ಇಳಿಯುವುದು ಖಚಿತ. ಮೆಕ್ಕಾ ಪ್ರವಾಸದಿಂದ ಹಿಂತಿರುಗಿದ ನಂತರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಮಹಿಮ ಪಟೇಲ್ ಅವರೂ ಜೆಡಿಎಸ್ ಸೇರಿದರು.
‘ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತೇನೆ. ಕ್ಷೇತ್ರದ ಎಲ್ಲ ಮುಖಂಡರು ಸಹಕಾರ ನೀಡುವ ವಿಶ್ವಾಸವಿದೆ’ ಎಂದು ಪಟೇಲ್ ಈ ಸಂದರ್ಭದಲ್ಲಿ ತಿಳಿಸಿದರು. ಪಕ್ಷಾಂತರಿಗಳಿಗೆ ಮಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಹತಾಶರಾಗಿರುವ ಅನೇಕರಿಗೆ ಟಿಕೆಟ್ ನೀಡುವ ಭರವಸೆಯನ್ನು ಜೆಡಿಎಸ್ ವರಿಷ್ಠರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ ಶಿವರಾಮಗೌಡ ಜೆಡಿಎಸ್‌ನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಶಾಸಕ ಜಮೀರ್ ಅಹಮದ್, ಉತ್ತರ ಲೋಕಸಭಾ ಕ್ಷೇತ್ರದಿಂದ ಕೆ.ಸಿ.ರಾಮಮೂರ್ತಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆಯಲು ವಿಫಲರಾದ ರಾಮಮೂರ್ತಿ ಜೆಡಿಎಸ್ ಸೇರಲು ಒಲವು ತೋರಿದ್ದಾರೆ ಎಂದು ಗೊತ್ತಾಗಿದೆ.
ವಸಂತ ಸಾಲ್ಯಾನ್ ಬಿಜೆಪಿಗೆ
ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ಶುಕ್ರವಾರ ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಅವರು ಈಗ ಆ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.