ADVERTISEMENT

ಸಂಪುಟ ಸಭೆ: ಗುಲ್ಬರ್ಗ ವಿಭಾಗಕ್ಕೆ ಬಂಪರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಗುಲ್ಬರ್ಗ: ರಸ್ತೆ, ಸೇತುವೆ, ಮನೆ, ಆಸ್ಪತ್ರೆ, ಕುಡಿಯುವ ನೀರು, ನೀರಾವರಿ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಗುಲ್ಬರ್ಗ ವಿಭಾಗಕ್ಕೆ ಒಟ್ಟು ರೂ.  5,408 ಕೋಟಿ ಅನುದಾನ ಒದಗಿಸಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಸಂಪುಟ ಸಭೆ ಗುರುವಾರ ಇಲ್ಲಿ  ತೀರ್ಮಾನಿಸಿತು.

ಬಿಜೆಪಿ ಸರ್ಕಾರ ಈವರೆಗೆ ಇಲ್ಲಿ ನಡೆಸಿದ್ದ ಮೂರು ಸಚಿವ ಸಂಪುಟ ಸಭೆಗಳಲ್ಲಿ ಒಟ್ಟು 119 ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.  ನಾಲ್ಕನೇ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದ 86 ವಿಷಯಗಳ ಪೈಕಿ 60 ವಿಷಯಗಳ ಬಗ್ಗೆ ಮಹತ್ವದ ನಿರ್ಣಯ ಕೈಗೊಂಡು  ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸರ್ಕಾರ ಸಮೃದ್ಧ ಕೊಡುಗೆ ನೀಡಿದೆ.

ರಾಜ್ಯದ ವಿವಿಧೆಡೆ ಜಾರಿ ಮಾಡುವ ಯೋಜನೆಗಳಿಗೆ ಸುಮಾರು ರೂ. 7,875 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದ ಸಭೆ, ಇದರಲ್ಲಿ ಸುಮಾರು ರೂ. 5,400 ಕೋಟಿಗೂ ಹೆಚ್ಚು ಹಣವನ್ನು ಗುಲ್ಬರ್ಗ ವಿಭಾಗದಲ್ಲಿ ವೆಚ್ಚ ಮಾಡಲು ಒಪ್ಪಿಗೆ ಸೂಚಿಸಿತು.

ಉಪ ಸಮಿತಿ ರಚನೆ:

ಹೈ.ಕ. ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 371ನೇ ಕಲಂ ಜಾರಿಗೆ ಹೆಜ್ಜೆ ಇಟ್ಟಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಭಿವೃದ್ಧಿ ಮತ್ತು ಮೀಸಲಾತಿ ವಿಷಯಗಳಿಗಾಗಿ ಕ್ರಿಯಾ ಯೋಜನೆಯ ಮೇಲ್ವಿಚಾರಣೆ ಮತ್ತು ಮಾರ್ಗಸೂಚಿ ಸಿದ್ಧಪಡಿಸಲು ಸಚಿವ ಸಂಪುಟದ ಉಪ ಸಮಿತಿ ರಚಿಸುವ ಮಹತ್ವದ ನಿರ್ಣಯ ಕೈಗೊಂಡಿತು.

ರಾಯಚೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗೆ ಶಿಫಾರಸು, ಕೊಪ್ಪಳ ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ, ದೇವದುರ್ಗದಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಅನುಮತಿ, ಕೃಷ್ಣಾ ಮೇಲ್ದಂಡೆ ಯೋಜನೆ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣಕ್ಕೆ ರೂ. 4,085 ಕೋಟಿ ಅನುದಾನಕ್ಕೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಅನುದಾನಕ್ಕೆ ಸಮ್ಮತಿ:
ಬೀದರ್-ಗುಲ್ಬರ್ಗ ಮಧ್ಯದ ಕುರಿಕೋಟಾ ಸೇತುವೆ ದುರಸ್ತಿ, ಪರ್ಯಾಯ ರಸ್ತೆ ನಿರ್ಮಾಣಕ್ಕೆ  ರೂ. 12.33 ಕೋಟಿ,  ಚಿಂಚೋಳಿ ತಾಲ್ಲೂಕಿನ ಕಾಗಿಣಾ ನದಿಗೆ ಅಡ್ಡಲಾಗಿ ಜಟ್ಟೂರು ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ರೂ. 8.55 ಕೋಟಿ, ಬೆಣ್ಣೆತೊರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ರೂ. 5.8 ಕೋಟಿ, ಜೇವರ್ಗಿ ತಾಲ್ಲೂಕಿನ ಹಿಪ್ಪರಗಾ ಕೋನ-ಸರಡಗಿ (ಬಿ) ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ರೂ. 40 ಕೋಟಿ, ಭಾಲ್ಕಿ ತಾಲ್ಲೂಕಿನ ಮಾಂಜ್ರಾ ನದಿಗೆ ಅಡ್ಡಲಾಗಿ ನಾಲ್ಕು ಸ್ಥಳಗಳಲ್ಲಿ ಸೇತುವೆ ನಿರ್ಮಾಣಕ್ಕೆ ರೂ. 33.5 ಕೋಟಿ ಅನುದಾನಕ್ಕೆ ಸಮ್ಮತಿಸಲಾಗಿದೆ.

ಸಿಂಧನೂರು-ಕುಷ್ಟಗಿ ರಸ್ತೆ ಅಭಿವೃದ್ಧಿಗೆ ರೂ. 136.35 ಕೋಟಿ, ಅಫಜಲಪುರ ತಾಲ್ಲೂಕಿನ ಮುಖ್ಯ ರಸ್ತೆ ಅಭಿವೃದ್ಧಿಗೆ ರೂ. 19 ಕೋಟಿ, ರಾಯಚೂರು ಜಿಲ್ಲೆಯ ದೇವದುರ್ಗ-ಗೂಗಲ್ ಮುಖ್ಯರಸ್ತೆಯ ಪುನರ್ ನಿರ್ಮಾಣಕ್ಕೆ ರೂ. 33 ಕೋಟಿ, ಹುನಗುಂದ-ಸುರಪುರ, ತಿಂಥಣಿ, ಚೌಡೇಶ್ವರಿಹಾಳ ಖೋಡಿ ಕಳ್ಳಾ ಮತ್ತು ಗುಲ್ಬರ್ಗ ಗ್ರಾಮೀಣ ಕ್ಷೇತ್ರ ಉಮರ್ಗಾ ಗಡಿಯಿಂದ ಆಳಂದ-ಮಹಾಗಾಂವ ಕ್ರಾಸ್ ರಸ್ತೆ ನಿರ್ಮಾಣಕ್ಕೆ ರೂ. 104 ಕೋಟಿ ಹಣವನ್ನು ಖರ್ಚು ಮಾಡಲು ನಿರ್ಧರಿಸಲಾಯಿತು.

ಬೀದರ್ ನಗರದ ನೀರು ವಿತರಣಾ ಕೊಳವೆ ಮಾರ್ಗ ನಿರ್ಮಿಸಲು ರೂ. 24.9 ಕೋಟಿ, ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ನೀಡಲಾಗಿದ್ದ ರೂ. 100 ಪ್ಯಾಕೇಜ್ ಹಣದಲ್ಲಿ ರೂ. 40 ಕೋಟಿ ಭೂಸ್ವಾಧೀನಕ್ಕೆ ಬಳಕೆಯಾದ ಹಿನ್ನೆಲೆಯಲ್ಲಿ, ಮತ್ತೆ ವಿಶೇಷ ನಿಧಿಯಿಂದ ರೂ. 40 ಕೋಟಿ ಹಣವನ್ನು ಪಾಲಿಕೆಗೆ ನೀಡಲು ಸಂಪುಟ ಸಭೆಯು ಒಪ್ಪಿಗೆ ನೀಡಿತು. ಅಲ್ಲದೆ, ಗುಲ್ಬರ್ಗ ನಗರದ `ಕೋಟನೂರ ಡಿ~ ಹೊಸ ವಸತಿ ಬಡಾವಣೆ ಅಭಿವೃದ್ಧಿಗೆ  ರೂ. 147 ಕೋಟಿ ಯೋಜನೆಯನ್ನು ಕೈಗೊಳ್ಳಲು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನುಮತಿ ನೀಡಲಾಯಿತು.

ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಬಹುತೇಕ ನಿರ್ಣಯಗಳು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಅಂಶಗಳು ಎಂಬುದು ಗಮನಾರ್ಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT