ADVERTISEMENT

ಸಂಪೂರ್ಣ ಪಾನ ನಿಷೇಧ ಸಾಧ್ಯವಿಲ್ಲ: ಸಿದ್ದರಾಮಯ್ಯ

ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿ ಮೌಢ್ಯ ಪ್ರತಿಬಂಧಕ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:38 IST
Last Updated 17 ಜನವರಿ 2016, 19:38 IST
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ ಪತ್ರಿಕೆ ಓದುವುದರಲ್ಲಿ ತಲ್ಲೀನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ ಪತ್ರಿಕೆ ಓದುವುದರಲ್ಲಿ ತಲ್ಲೀನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ.   

ಬಾಗಲಕೋಟೆ: ರಾಜ್ಯದಲ್ಲಿ ಸಂಪೂರ್ಣವಾಗಿ ಪಾನ ನಿಷೇಧ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೇಶದಾದ್ಯಂತ ಪಾನ ನಿಷೇಧ ಜಾರಿಯಾದರೆ ಮಾತ್ರ ಇದು ಸಾಧ್ಯವೇ ಹೊರತು ಅಲ್ಲೊಂದು, ಇಲ್ಲೊಂದು ರಾಜ್ಯ ಪಾನ ನಿಷೇಧಿಸಿದರೆ ಯಶಸ್ವಿಯಾಗದು ಎಂದರು.

ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗುವುದು. ಇದರ ವ್ಯಾಪ್ತಿಯಲ್ಲಿ ಯಾವುದೇ ಧಾರ್ಮಿಕ ಆಚರಣೆ, ನಂಬಿಕೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭೂಸ್ವಾಧೀನ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ 1.32 ಲಕ್ಷ ಎಕರೆ ಭೂಮಿ ಅಗತ್ಯವಿದೆ. ಈ ಸಂಬಂಧ ಈಗಾಗಲೇ 60 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. 2013ರ ನೂತನ ಭೂಸ್ವಾಧೀನ ಕಾಯ್ದೆ ಪ್ರಕಾರ ಇದಕ್ಕಾಗಿ ₹ 1,500 ಕೋಟಿ ಅನುದಾನ ನೀಡಲಾಗಿದೆ ಎಂದರು.

ಗಿಮಿಕ್‌ ಅಲ್ಲ: ರಾಜ್ಯ ಸರ್ಕಾರವು ಹತ್ತು, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದನ್ನು ಚುನಾವಣಾ ಗಿಮಿಕ್‌ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಕುಮಾರಸ್ವಾಮಿ ಅವರಿಗೆ ಕಾಮನ್‌ಸೆನ್ಸ್‌ ಇಲ್ಲ. ಇದು ಚುನಾವಣಾ ಗಿಮಿಕ್‌ ಅಲ್ಲ. ರಾಜ್ಯದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಎಂದರು.

ಬಿಜೆಪಿ ಮುಖಂಡರು ತಮ್ಮನ್ನು ಜಾತಿವಾದಿ ಎಂದು ಟೀಕಿಸುತ್ತಿದ್ದಾರೆ. ನಿಜವಾದ ಜಾತಿವಾದಿ ಮತ್ತು ಕೋಮು ವಾದಿಗಳು ಅವರೇ. ಅದೇ ಅವರಿಗೆ ಬಂಡವಾಳ ಎಂದ ಸಿದ್ದರಾ ಮಯ್ಯ, ವಿರೋಧ ಪಕ್ಷಗಳ ಮುಖಂಡರು  ಟೀಕೆ ಮಾಡುವುದನ್ನು ಬಿಡಬೇಕು. ಅಭಿವೃದ್ಧಿ ಪರ ಸಲಹೆ ನೀಡಿದರೆ ಖಂಡಿತ ಸ್ವೀಕರಿಸುವೆ ಎಂದರು.

ಹಣಕಾಸು ಖಾತೆ ನಿಭಾಯಿಸುವಲ್ಲಿ ಮುಖ್ಯಮಂತ್ರಿ ವಿಫಲ: ಎಚ್‌ಡಿಕೆ
ಹುಬ್ಬಳ್ಳಿ: ರಾಜ್ಯದ ಆರ್ಥಿಕ ಸ್ಥಿತಿ ನಿಭಾಯಿಸುವಲ್ಲಿ ಹಣಕಾಸು ಖಾತೆ ಯನ್ನೂ ವಹಿಸಿಕೊಂಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭಾನುವಾರ ಇಲ್ಲಿ ಆರೋಪಿಸಿದರು.

‘ಸಿದ್ದರಾಮಯ್ಯ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಎಂದು ಜನ ಮಾತ ನಾಡುವ ಕಾಲ ದೂರವಿಲ್ಲ. ವಿವಿಧ ಕಾಮಗಾರಿಗಳಿಗೆ ಕೋಟ್ಯಂತರ ಹಣ ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳುತ್ತಿರು ವುದೇ ಬೋಗಸ್‌’ ಎಂದು  ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಈ  ಹಿಂದಿನ ಸರ್ಕಾರಗಳು ಆರಂಭಿಸಿದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅನುದಾನ ಇಲ್ಲದ ಕಾರಣಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಹೀಗಿದ್ದರೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಎರಡೂವರೆ ವರ್ಷದ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ₹ 16 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಜನತೆಗೆ ವಾಸ್ತವ ಸ್ಥಿತಿ ತಿಳಿಸಬೇಕು’ ಎಂದೂ ಅವರು ಆಗ್ರಹಿಸಿದರು.

‘ವಿಧಾನಸಭೆಯ ಮೂರು ಸ್ಥಾನಗಳಿಗೆ ಫೆ. 13ರಂದು  ನಡೆಯಲಿ ರುವ ಉಪ ಚುನಾವಣೆ ಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ  ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಈ ಚುನಾವಣೆಗೆ ಮಾಡುವ ವೆಚ್ಚವನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆಗಳಿಗೆ ವಿತರಿಸುವ ಮೂಲಕ ನೊಂದವರಿಗೆ ನೆರವಾ ಗುವ ಉದ್ದೇಶವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT