ADVERTISEMENT

ಸಂಬಂಜ ಅನ್ನಾದು ದೊಡದು ಕನಾ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಬೆಂಗಳೂರು: ಪ್ರತಿ ಪದವನ್ನೂ ತೂಗಿ ಅದರ ಅರ್ಥ ವ್ಯಾಪ್ತಿಯನ್ನು ಸರಿಯಾಗಿ ಅಂದಾಜಿಸಿ ಒಂದರ ಪಕ್ಕ ಮತ್ತೊಂದರಂತೆ ಜೋಡಿಸಿ ವಾಕ್ಯಗಳನ್ನೂ ಖಂಡಿಕೆಗಳನ್ನೂ ರೂಪಿಸುತ್ತಾ ಹೋಗುವ ದೇವನೂರ ಮಹಾದೇವ ತಮ್ಮ ಅತಿಥಿ ಸಂಪಾದಕನ ಕರ್ತವ್ಯವನ್ನೂ ಅಷ್ಟೇ ತೂಕದಲ್ಲಿ ನಿರ್ವಹಿಸಿದರು.

ಸಂಚಿಕೆ ಮುದ್ರಣಕ್ಕೆ ಸಿದ್ಧವಾಗುವ ಕೊನೆಯ ಕ್ಷಣದ ತನಕವೂ ನುರಿತ ಸಂಚಿಕೆಯನ್ನು ರೂಪಿಸುವ ಎಲ್ಲಾ ಕೆಲಸಗಳಲ್ಲಿಯೂ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸುತ್ತಿದ್ದರು.

`ದಲಿತ ವಿಶೇಷ ಸಂಚಿಕೆ~ಯನ್ನು ರೂಪಿಸುವ ಕನಸು ಮೂಡಿದ ಕ್ಷಣದಲ್ಲಿಯೇ ಅದರ ಸಂಪಾದಕತ್ವ ದೇವನೂರ ಮಹಾದೇವರದ್ದು ಎಂಬುದು ನಿರ್ಧಾರವಾಗಿತ್ತು.  ಆದರೆ ಮಹಾದೇವ ಅವರನ್ನು ಒಪ್ಪಿಸುವುದು ಸುಲಭದ ಕೆಲಸ ಅಲ್ಲ ಎನ್ನುವುದು ಗೊತ್ತಿತ್ತು.

 ನಿರೀಕ್ಷೆಯಂತೆಯೇ ಅವರು ಮೊದಲು ನಿರಾಕರಿಸಿದರು, ನಾವು ಪಟ್ಟು ಬಿಡದಿರುವುದನ್ನು ಕಂಡು ಕೊನೆಗೆ ಒಪ್ಪಿಗೆ ನೀಡಿದರು. ಆದರೆ ಒಪ್ಪಿಕೊಂಡ ಮೇಲೆ ನಾವು ಕಂಡದ್ದು ಬೇರೆಯೇ ದೇವನೂರರನ್ನು. ಮೊದಲ ದಿನದಿಂದಲೇ ತಮ್ಮನ್ನು ಸಂಪೂರ್ಣವಾಗಿ ಸಂಚಿಕೆಯನ್ನು ರೂಪಿಸುವ ಕೆಲಸಕ್ಕೆ ಅರ್ಪಿಸಿಕೊಂಡಿದ್ದರು. ಏಪ್ರಿಲ್ 9ರ ಸೋಮವಾರದಂದೇ `ಪ್ರಜಾವಾಣಿ~ ಕಚೇರಿಗೆ ಬಂದಿದ್ದ ಮಹಾದೇವ ದಿನದ ಪತ್ರಿಕೆಯನ್ನು ಹೊರತರುವ ಎಲ್ಲಾ ಬಗೆಯ ಕೆಲಸಗಳ ಕುರಿತು ಅರಿತೇ ಮರಳಿದರು.

ನಂತರದ ಮೂರೂ ದಿನ ಮೂರೂ ಹೊತ್ತು ಅವರು ನಮ್ಮ  ಬಳಗದ ಸದಸ್ಯರ ನಿರಂತರ ಸಂಪರ್ಕದಲ್ಲಿದ್ದರು. ಲೇಖನದ ವಿಷಯ ಮತ್ತು ಲೇಖಕರ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸುತ್ತಲೇ ಇದ್ದರು.

ಶುಕ್ರವಾರ ಮತ್ತೆ ಅವರು ಕಚೇರಿಗೆ ಆಗಮಿಸಿದಾಗ ಅವರಲ್ಲಿದ್ದದ್ದು ಸಂಪಾದಕನ ಸಿದ್ಧತೆ. ದಲಿತ ಬದುಕಿನ ಎಲ್ಲಾ ಮಜಲುಗಳನ್ನು ಸಂಚಿಕೆ ಪ್ರತಿಬಿಂಬಿಸಬೇಕೆಂಬ ಅವರ ನಿಲುವು ಅವರು ಆರಿಸಿಕೊಂಡ ಲೇಖಕರು ಮತ್ತು ಅವರಿಗೆ ಕೊಡಲಾದ ವಿಷಯಗಳೇ ಪ್ರತಿಬಿಂಬಿಸುತ್ತಿವೆ.

ಸಂಶೋಧನಾ ಪ್ರಬಂಧವೊಂದರ ಶೈಲಿಯಲ್ಲಿದ್ದ ಲೇಖನವೊಂದನ್ನು ಜನಸಾಮಾನ್ಯರ ಭಾಷೆಗೆ ಬದಲಾಯಿಸುವ ಸಲಹೆಯೂ ಅವರದ್ದೇ ಆಗಿತ್ತು. ಪದ ಬಳಕೆಯ ಕುರಿತು ಅವರಿಗಿರುವ ಕಾಳಜಿ ಶೀರ್ಷಿಕೆಗಳಲ್ಲಿ ಪ್ರತಿಬಿಂಬಿಸಿದವು. ನಿತ್ಯದ ಸಂಪಾದಕೀಯದ ವಿಷಯವನ್ನು ಸೂಚಿಸುವಲ್ಲಿಯೂ ದೇವನೂರರ ಸಹಜ ಶೈಲಿಯಿತ್ತು.

ಭಾರತಕ್ಕೆ ಹೊಸತಾಗಿರುವ `ಸಾಮಾಜಿಕ ಪೊಲೀಸಿಂಗ್~ ವಿಷಯದ ಕುರಿತಂತೆ ಸಂಪಾದಕೀಯ ಬರೆಯಬೇಕೆಂಬ ನಿರ್ಧಾರವೂ ಅವರದ್ದೇ ಆಗಿತ್ತು.

ಪದಗಳನ್ನು ಅಳೆದು ತೂಗುವ ದೇವನೂರರ ಗುಣವನ್ನು ಅರಿತವರಿಗೆಲ್ಲಾ ಆಶ್ಚರ್ಯವಾಗುವಷ್ಟು ಅವರು ಮಾತನಾಡುತ್ತಿದ್ದರು. ಅವರು ಮಾತನಾಡಿಸದೆ ಉಳಿದ ಒಬ್ಬ ಸಿಬ್ಬಂದಿಯೂ ಕಚೇರಿಯಲ್ಲಿರಲಿಲ್ಲ.
ಬಹಳ ಮುಖ್ಯವಾಗಿ ನಮ್ಮ ಸಂಪಾದಕೀಯ ಬಳಗದಲ್ಲಿ  ಎಲ್ಲ ಸಮುದಾಯಗಳಿಗೆ ಮತ್ತು ಪ್ರದೇಶಗಳಿಗೆ ನೀಡಿರುವ ಪ್ರಾತಿನಿಧ್ಯ ಅವರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು. ಅವರ ಮಾತುಗಳಲ್ಲಿ ಔಪಚಾರಿಕತೆ ಇರಲಿಲ್ಲ.ಅದರಲ್ಲಿ ಅತಿಥಿಯ ಸೌಜನ್ಯದಷ್ಟೇ ಸಂಪಾದಕನ ಜವಾಬ್ದಾರಿಯೂ ಇತ್ತು.

ಮಧ್ಯಾಹ್ನ ಕಚೇರಿಗೆ ಬಂದಾಗ ಅವರ ಮುಖದ ಮೇಲಿದ್ದ ಮುಗುಳ್ನಗೆ ರಾತ್ರಿ ಕೆಲಸ ಮುಗಿಸಿ ಸಂಪಾದಕೀಯ ಬಳಗದ ಸದಸ್ಯರ ಜತೆ ಪೋಟೋ ತೆಗೆಸಿಕೊಂಡು ಹೋಗುವಾಗಲೂ ಮಾಸದೆ ಹಾಗೆಯ ಉಳಿದಿತ್ತು. `ಸಂಬಂಜ `ಎಂದರೆ ಇದೇ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.