ADVERTISEMENT

‘ಸಂವರ್ಧಿನೀ ಸಭಾದಿಂದ ಹೊರ ಹಾಕುವ ಪ್ರಮೇಯವೇ ಇಲ್ಲ’

‘ರಾಮಚಂದ್ರಪುರ ಮಠಕ್ಕೆ ಸ್ವತಂತ್ರ್ಯ ಅಸ್ತಿತ್ವವಿದೆ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST

ಬೆಂಗಳೂರು: ‘ಶೃಂಗೇರಿಯ ಸನಾತನ ಧರ್ಮ ಸಂವರ್ಧಿನೀ ಸಭಾದೊಂದಿಗೆ ರಾಮಚಂದ್ರಾಪುರ ಮಠ ಎಂದಿಗೂ ಗುರುತಿಸಿಕೊಂಡಿಲ್ಲ. ಹಾಗಾಗಿ ಅವರು ನಮ್ಮನ್ನು ಹೊರ ಹಾಕುವ ಪ್ರಮೇಯವೇ ಇಲ್ಲ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸ್ಪಷ್ಟಪಡಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಂಕರಾಚಾರ್ಯರು ಸ್ಥಾಪಿಸಿದ ರಾಮಚಂದ್ರಾಪುರ ಮಠ ಯಾರನ್ನೂ ಅವಲಂಬಿಸಿಲ್ಲ. ಇದಕ್ಕೆ ತನ್ನದೇ ಆದ ಅಸ್ಮಿತೆ, ಶಿಷ್ಯ ವರ್ಗ, ಭಕ್ತ ವರ್ಗ ಇದೆ. ಇಲ್ಲಿಂದ ಯಾರನ್ನೂ ಹೊರಗೆ ಕಳುಹಿಸಲು, ಒಳಗೆ ಕರೆದುಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಸನಾತನ ಧರ್ಮ ಸಂವರ್ಧಿನಿ ಸಭಾದಿಂದ ಮಠಕ್ಕೆ ಯಾವುದೇ ಆಮಂತ್ರಣ ಬಂದಿಲ್ಲ, ಸಂರ್ಪಕವೂ ಇಲ್ಲ. ಅಲ್ಲದೆ, ಅವರು ಹೊರಡಿಸಿರುವ ನಿರ್ಣಯ ಪ್ರತಿಯಲ್ಲಿ ಮಠದ ಹೆಸರನ್ನಾಗಲಿ, ನಮ್ಮ ಹೆಸರನ್ನಾಗಲಿ ಉಲ್ಲೇಖಿಸಿಲ್ಲ’ ಎಂದು ಹೇಳಿದರು.

ADVERTISEMENT

ಶೃಂಗೇರಿ ಶಾರದಾ ಪೀಠದ ಆಶ್ರಯದಲ್ಲಿ ಕಳೆದ ತಿಂಗಳು ನಡೆದ ‘ಸನಾತನ ಧರ್ಮ ಸಂವರ್ಧಿನೀ ಸಭಾ’ದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಾಧೀಶರು, ಅತ್ಯಾಚಾರ, ಅನೈತಿಕ ಸಂಬಂಧದಂತಹ ಗಂಭೀರ ಆರೋಪಗಳನ್ನು ಹೊತ್ತಿರುವ ಮಠಾಧೀಶರನ್ನು ಸಭಾದಿಂದ ಕೈಬಿಡುವ ನಿರ್ಣಯ ಕೈಗೊಂಡಿದ್ದರು. ಈ ನಿರ್ಣಯಕ್ಕೆ ರಾಘವೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದರು.

ರಾಜಕೀಯ ಕೆಸರು ಇದ್ದಂತೆ: ‘ರಾಜಕೀಯ ಕೆಸರು ಇದ್ದಂತೆ. ರಾಮಚಂದ್ರಾಪುರ ಮಠ ಚುನಾವಣಾ ರಾಜಕೀಯವನ್ನು ಎಂದಿಗೂ ಮಾಡುವುದಿಲ್ಲ. ಗೋ ರಕ್ಷಣೆ ನಿಲುವು ಹೊಂದಿರುವವರಿಗೆ ಆಶೀರ್ವದಿಸುತ್ತೇವೆ’ ಎಂದು ತಿಳಿಸಿದರು.

**

’ಹೋಮ–ಹವನ ಹೆಚ್ಚಾಗಿವೆ’

‘ಚುನಾವಣೆ ಸಮೀಪದಲ್ಲಿದ್ದಾಗ ಸಾಮಾನ್ಯವಾಗಿ ರಾಜಕಾರಣಿಗಳಿಂದ ಹೋಮ–ಹವನ ಮಾಡಿಸುವುದು ಹೆಚ್ಚಿರುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ. ಎರಡು ತಿಂಗಳಿಂದ ಮಠದಲ್ಲಿ ಪ್ರತಿದಿನ ಹೋಮಗಳು ನಡೆಯುತ್ತಲೇ ಇವೆ. ಮೈಸೂರಿನಿಂದ ಕಲಬುರ್ಗಿವರೆಗಿನ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮಠಕ್ಕೆ ಬರುತ್ತಾರೆ’ ಎಂದು ರಾಘವೇಶ್ವರ ಶ್ರೀ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.