ADVERTISEMENT

ಸಂವಿಧಾನ ಉಳಿದರೆ ದೇಶ ಉಳಿಯಲಿದೆ: ಡಾ.ಪ್ರಕಾಶ್ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:46 IST
Last Updated 30 ಮಾರ್ಚ್ 2018, 9:46 IST
ಕಾರ್ಯಕ್ರಮದಲ್ಲಿ ಡಾ.ಪ್ರಕಾಶ್ ಅಂಬೇಡ್ಕರ್, ರೈತ ಮುಖಂಡ ಗೋವಿಂದರಾಜ್, ಸಂಘಟನೆ ಮುಖಂಡರಿದ್ದರು
ಕಾರ್ಯಕ್ರಮದಲ್ಲಿ ಡಾ.ಪ್ರಕಾಶ್ ಅಂಬೇಡ್ಕರ್, ರೈತ ಮುಖಂಡ ಗೋವಿಂದರಾಜ್, ಸಂಘಟನೆ ಮುಖಂಡರಿದ್ದರು   

ತುಮಕೂರು: ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ದೇಶ ಉಳಿಯಬೇಕು ಎನ್ನುವವರು ಸಂವಿಧಾನ ಬದಲಾವಣೆ ಮಾಡಲು ಹೊರಟವರ ವಿರುದ್ಧ ಗಟ್ಟಿ ಹೋರಾಟ ನಡೆಸಬೇಕಿದೆ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಡಾ.ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದರು.

ಶುಕ್ರವಾರ ನಗರದ ಟೌನ್ ಹಾಲ್ ನಲ್ಲಿ ಜನಾಂದೋಲನಗಳ ಮಹಾಮೈತ್ರಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ಧ ಸಂವಿಧಾನ ಉಳಿಸಿ- ದೇಶ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವರು, ಸಂವಿಧಾನದ ಮೇಲೆ ಪ್ರಮಾಣ ಮಾಡಿ ಈ ದೇಶದ ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯುತ್ತೇನೆ.ಸಂವಿಧಾನ ಗೌರವಿಸುತ್ತೇವೆ ಎಂದು ಹೇಳಿದವರೇ ಈಗ ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸುತ್ತಿದ್ದಾರೆ.ಕೇಂದ್ರ ಸಚಿವ ಅನಂತಕುಮಾರ ಬಹಿರಂಗವಾಗಿ ಈ ಬಗ್ಗೆ ಹೇಳಿಕೆ ನೀಡಿದ್ದರೂ ಇಂತಹವರು ಅನೇಕರು ಅದೇ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಸಂವಿಧಾನ ಜಾತಿ,ಧರ್ಮ, ಬಡವ, ಶ್ರೀಮಂತ ಎಂಬ ತಾರತಮ್ಯ ಮಾಡಿಲ್ಲ. ಎಲ್ಲರಿಗೂ ಸಮಾನ ಹಕ್ಕುಗಳನ್ನೇ ನೀಡಿದೆ. ಸಮಾನತೆಯನ್ನೇ ಪ್ರತಿಪಾದಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಇರಲಿ, ಯಡಿಯೂರಪ್ಪ ಇರಲಿ, ಸಾಮಾನ್ಯ ನಾಗರಿಕರೇ ಇರಲಿ. ಎಲ್ಲರ ಮತದ ಮೌಲ್ಯ ಒಂದೇ ಆಗಿದೆ ಎಂದರು.

ದೇಶದಲ್ಲಿ ಹಲವು ಜಾತಿ,ಧರ್ಮ, ಪಂಗಡಗಳಿದ್ದರೂ ಅವರ ಧರ್ಮ ಅನುಸರಿಸುವ, ಪ್ರಚಾರ ಮಾಡುವ ಹಕ್ಕು ಕಲ್ಪಿಸಿದೆ. ಆದರೆ, ಅದು ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವಂತಿರಬಾರದು, ಬೇರೆ ಧರ್ಮವನ್ನು ವಿರೋಧಿಸುವಂತಿರಬಾರದು. ಅಲ್ಲದೇ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನಗಿಷ್ಟವಾದ ಧರ್ಮ ಅನುಸರಿಸಲಿ, ಇಷ್ಟವಾದ ದೇವರನ್ನು ಆರಾಧಿಸಲು ಹಕ್ಕು ನೀಡಿದೆ. ಇಂತಹ ಮೌಲ್ಯಯುತ ಸಂವಿಧಾನ ವಿಶ್ವದಲ್ಲಿ ಎಲ್ಲೂ ಇಲ್ಲ. ಈ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಬದಲಾವಣೆಗೆ ಪ್ರಯತ್ನ ನಡೆಸಿರುವುದು ವಿಪರ್ಯಾಸ ಎಂದರು.

ಸಂವಿಧಾನಕ್ಕೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರ್.ಎಸ್.ಎಸ್) ಕೊಡುಗೆ ಏನೂ ಇಲ್ಲ. ಅವರ ಕೊಡುಗೆ ಏನಿದ್ದರೂ ಸಂವಿಧಾನ ವಿರೋಧಿಸುವುದಕ್ಕೆ ಎಂದು ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ನೆಟ್ಟ ಸಂವಿಧಾನ ಎಂಬ ಹಣ್ಣಿನ ಗಿಡವು ದೇಶದ ಎಲ್ಲ ನಾಗರಿಕರಿಗೂ ಯಾವುದೇ ತಾರತಮ್ಯವಿಲ್ಲದೇ ಹಣ್ಣುಗಳನ್ನು ಕೊಟ್ಟಿದೆ. ಈಗಲೂ ನೀಡುತ್ತಿದೆ. ಹೀಗಿದ್ದಾಗ್ಯೂ ಆ ಹಣ್ಣಿನ ಗಿಡ ಬದಲಾಗಬೇಕು ಎಂಬುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಾಂಸ್ಕೃತಿಕ, ಭೌಗೋಳಿಕ ವಿರೋಧಾಭಾಸಗಳನ್ನು ಮೀರಿ ದೇಶದ ಹಿತರಕ್ಷಣೆಗೆ ಮುಂದಾಗಬೇಕು. ಒಂದು ಕಾನೂನು ರಚನೆ ಮಾಡುವುದು ಅಷ್ಟು ಸರಳವಾದುದಲ್ಲ. ಉತ್ತರ, ದಕ್ಷಿಣ, ಈಶಾನ್ಯ ಹೀಗೆ ದೇಶದ ನಾನಾ ಭಾಗಗಳ ಜನರ ಅಭಿಪ್ರಾಯ ವಿಭಿನ್ನವಾಗಿರುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.