ADVERTISEMENT

ಸಂಸ್ಥೆಗಳಿಂದ ದುಬಾರಿ ದರ ವಸೂಲಿ: ಏಜೆಂಟರ ದೂರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಬೆಂಗಳೂರು: ಕಿಂಗ್‌ಫಿಷರ್ ವಿಮಾನ ಸೇವೆಯಲ್ಲಿ ಆಗಿರುವ ವ್ಯತ್ಯಯವನ್ನು ಲಾಭಕ್ಕೆ ಬಳಸಿಕೊಂಡಿರುವ ಇತರೆ ಕಂಪೆನಿಗಳು, ಕೆಲವು ಮಾರ್ಗಗಳಲ್ಲಿ ಟಿಕೆಟ್ ದರವನ್ನು ಎರಡು ಪಟ್ಟಿನವರೆಗೂ ಹೆಚ್ಚಿಸಿವೆ ಎಂದು ಟ್ರಾವೆಲ್ ಏಜೆಂಟರು ಆಪಾದಿಸಿದ್ದಾರೆ.

ಮುಂಬೈ-ದೆಹಲಿ, ಬೆಂಗಳೂರು-ದೆಹಲಿಯಂತಹ ಮಾರ್ಗಗಳಲ್ಲಿ ಪ್ರಯಾಣ ಶುಲ್ಕ ದುಪ್ಪಟ್ಟರಷ್ಟು ಹೆಚ್ಚಾಗಿದೆ. ಈ ಮುಂಚೆ ಇದ್ದ ಕಡಿಮೆ ದರದ ಟಿಕೆಟ್ ಶ್ರೇಣಿ ನಾಪತ್ತೆ ಆಗಿಬಿಟ್ಟಿದೆ ಎಂದು ದೂರಿದ್ದಾರೆ.

ದೆಹಲಿ-ಮುಂಬೈ ಪ್ರಯಾಣಕ್ಕೆ 4500-5000 ರೂಪಾಯಿ ಇದ್ದ ಬೆಲೆ ಈಗ 6555-7305ಕ್ಕೆ ಏರಿದೆ. ಹಾಗೆಯೇ, ದೆಹಲಿ-ಬೆಂಗಳೂರು ನಡುವಿನ ಪ್ರಯಾಣಕ್ಕೆ 6000-7500 ರೂಪಾಯಿ ಇದ್ದ ದರ ಈಗ 12,000-14,000ಕ್ಕೆ ಏರಿದೆ ಎಂದು ಅವರು ಪಟ್ಟಿ ನೀಡುತ್ತಾರೆ.

ಅದೇ ರೀತಿ ದೆಹಲಿ-ಕೋಲ್ಕತ್ತಾ ಮಾರ್ಗದ ಬೆಲೆ 5000 ರೂಪಾಯಿಯಿಂದ 6500ಕ್ಕೆ ಹೆಚ್ಚಾಗಿದೆ ಎಂಬುದು ಅವರ ದೂರು.

ಡಿಜಿಸಿಎ ನಿರಾಕರಣೆ

ಕಿಂಗ್‌ಫಿಷರ್ ಸೇವಾ ವ್ಯತ್ಯಯದ ಲಾಭ ಪಡೆಯಲು ಇತರೆ ಸಂಸ್ಥೆಗಳು ಟಿಕೆಟ್ ದರ ಹೆಚ್ಚಿಸಿವೆ ಎಂಬ ವರದಿಗಳನ್ನು ಡಿಜಿಸಿಎ ನಿರಾಕರಿಸಿದೆ.

ಕಿಂಗ್‌ಫಿಷರ್ ಸೇವಾ ವ್ಯತ್ಯಯದಿಂದ ತೊಂದರೆಗೊಳಗಾದವರು ಕಡೇ ಗಳಿಗೆಯಲ್ಲಿ ಲಭ್ಯವಾಗುವ ಬೇರೆ ಕಂಪೆನಿಗಳ ಅಧಿಕ ದರದ ಟಿಕೆಟ್‌ಗಳನ್ನು ಅನಿವಾರ್ಯವಾಗಿ ಪಡೆಯುತ್ತಿದ್ದಾರೆ. ಆದರೆ, ಯಾವುದೇ ವಿಮಾನಯಾನ ಸಂಸ್ಥೆ ಅಧಿಕೃತವಾಗಿ ಟಿಕೆಟ್ ದರ ಹೆಚ್ಚಿಸಿಲ್ಲ ಎಂದು ಡಿಜಿಸಿಎ ಮುಖ್ಯಸ್ಥ ಭರತ್ ಭೂಷಣ್ ಹೇಳಿದ್ದಾರೆ.

`2010ರ ಡಿಸೆಂಬರ್‌ನಿಂದ ನಾವು ಪ್ರಯಾಣ ದರದ ಬಗ್ಗೆ ನಿಗಾ ವಹಿಸಿದ್ದೇವೆ. ಟಿಕೆಟ್ ದರ ಹಠಾತ್ ಏರಿಕೆ ಆಗಿಲ್ಲ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.