ಬೆಂಗಳೂರು: ಭ್ರಷ್ಟಾಚಾರ ನಿಯಂತ್ರಣ ಮತ್ತು ಸರ್ಕಾರಿ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ಒದಗಿಸುವ ಉದ್ದೇಶ ಹೊಂದಿರುವ `ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ~ (ಸಕಾಲ) ಸೋಮವಾರದಿಂದ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಇದರಿಂದ ರಾಜ್ಯ ಸರ್ಕಾರದ 11 ಇಲಾಖೆಗಳ 151 ಸೇವೆಗಳು ನಿಗದಿತ ಕಾಲಮಿತಿಯೊಳಗೆ ದೊರೆಯಲಿವೆ.
ಹಣಕಾಸು, ಒಳಾಡಳಿತ, ಕಂದಾಯ, ಸ್ಥಳೀಯ ಪ್ರಾಧಿಕಾರಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆಹಾರ ಮತ್ತು ನಾಗರಿಕ ಪೂರೈಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾರ್ಮಿಕ ಹಾಗೂ ಸಾರಿಗೆ ಇಲಾಖೆಗಳ ಸೇವೆಗಳನ್ನು `ಸಕಾಲ~ ಯೋಜನೆಯಡಿ ಒದಗಿಸಲಾಗುತ್ತದೆ.
ಇಂದು, ನಾಳೆ ಇನ್ನಿಲ್ಲ; ಹೇಳಿದ ಸಮಯ (ದಿನ) ತಪ್ಪಲ್ಲ~ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದಿದೆ.
ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ರಾಜ್ಯಮಟ್ಟದಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಚಾಲನೆ ನೀಡಿದರು. ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ `ಸಕಾಲ~ ಜಾರಿ ಆರಂಭ ಕಾರ್ಯಕ್ರಮ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ನೂತನ ಯೋಜನೆ ಅನುಷ್ಠಾನಕ್ಕೆ ಹಸಿರುನಿಶಾನೆ ತೋರಿದರು.
ಜನನದಿಂದ ಮರಣದವರೆಗೆ: ಹುಟ್ಟಿದ ಮಗುವಿನ ಜನನ ಪ್ರಮಾಣ ಪತ್ರ ವಿತರಣೆಯಿಂದ ಮೃತರಾದವರ ಮರಣ ಪತ್ರ ನೀಡುವವರೆಗೆ 151 ಸೇವೆಗಳು `ಸಕಾಲ~ದ ವ್ಯಾಪ್ತಿಯಲ್ಲಿವೆ. ವಾಣಿಜ್ಯ ಪರವಾನಗಿ, ಆಸ್ತಿಯ ಖಾತಾ ನೀಡಿಕೆ, ಕಟ್ಟಡ ನಕ್ಷೆ ಅನುಮೋದನೆ, ನೀರು ಮತ್ತು ಒಳಚರಂಡಿ ಸಂಪರ್ಕ, ವಾಹನ ಚಾಲನ ಪರವಾನಗಿಗಳ ವಿತರಣೆ, ವಾಹನಗಳ ನೋಂದಣಿ, ದ್ವಿಪ್ರತಿ ಪಡೆಯುವುದು, ಉಚಿತ ಮತ್ತು ರಿಯಾಯಿತಿ ದರದ ಬಸ್ ಪಾಸ್‌ಗಳ ವಿತರಣೆ, ಅಪಘಾತ ಪರಿಹಾರ ನಿಧಿಯಡಿ ಪರಿಹಾರ ವಿತರಣೆ, ಪಡಿತರ ಚೀಟಿ ನೀಡುವುದು, ಹಿಂದಕ್ಕೆ ಪಡೆಯುವುದು, ನವೀಕರಣ; ಆಹಾರ ಧಾನ್ಯ, ಬೇಳೆ, ಖಾದ್ಯತೈಲ ಮತ್ತು ಸೀಮೆಎಣ್ಣೆ ಸಗಟು ಮಾರಾಟ ಪರವಾನಗಿ ನೀಡುವ ಸೇವೆಗಳು ಈ ಕಾಯ್ದೆಯ ವ್ಯಾಪ್ತಿಯಲ್ಲಿವೆ.
ಭೂಮಿಯ ಮೇಲಿನ ಹಕ್ಕುಗಳ ಪ್ರಮಾಣ ಪತ್ರ, ಕೃಷಿ ಭೂಮಿ ಪರಿವರ್ತನೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಪರಿಶೀಲನೆ ಮತ್ತು ಸಿಂಧುತ್ವ ಪ್ರಮಾಣ ಪತ್ರ, ಭೂಸ್ವಾಧೀನ ಪರಿಹಾರ ಸಂದಾಯ, ನಿವಾಸಿ ಪ್ರಮಾಣ ಪತ್ರ, ಜನಸಂಖ್ಯೆ ಪ್ರಮಾಣ ಪತ್ರ, ಕೃಷಿಕುಟುಂಬದ ಸದಸ್ಯ ಪ್ರಮಾಣ, ವಿವಾಹ ಸಂಬಂಧ ಪ್ರಮಾಣ ಪತ್ರಗಳು, ಭೂರಹಿತ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣ ಪತ್ರ, ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಪ್ರತಿ ನೀಡುವುದು, ಸಭೆ ಮತ್ತು ಮೆರವಣಿಗೆಗೆ ಅನುಮತಿ ನೀಡುವುದು, ವೀಸಾ ನಿರಾಕ್ಷೇಪಣಾ ಪತ್ರ ವಿತರಣೆ, ಪಾಸ್‌ಪೋರ್ಟ್ ಸಂಬಂಧ ಪರಿಶೀಲನೆ ಸೇರಿದಂತೆ ಹಲವು ಸೇವೆಗಳು ಈ ಯೋಜನೆಯಲ್ಲಿ ನಿಶ್ಚಿತ ಅವಧಿಯಲ್ಲಿ ದೊರೆಯಲಿವೆ.
ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯುವುದು ಮತ್ತು ಮರುಮೌಲ್ಯಮಾಪನ, ಶಿಕ್ಷಣ ಸಂಸ್ಥೆಗಳ ನೋಂದಣಿ, ಮಾನ್ಯತೆ ನವೀಕರಣ, ಗ್ರಾಮ ಪಂಚಾಯಿತಿಗಳ ಮೂಲಕ ಬೀದಿದೀಪಗಳು ಹಾಗೂ ಕುಡಿಯುವ ನೀರಿನ ನಿರ್ವಹಣೆ ಮತ್ತಿತರ ಅನಿವಾರ್ಯ ಸೇವೆಗಳನ್ನು ಈ ಕಾಯ್ದೆಯಡಿ ತರಲಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ನೀಡುವ ಹೆಚ್ಚಿನ ಸೌಲಭ್ಯಗಳು ಇನ್ನು `ಸಕಾಲ~ದ ವ್ಯಾಪ್ತಿಯಲ್ಲೇ ಲಭ್ಯವಾಗುತ್ತವೆ.
ಪ್ರತ್ಯೇಕ ಕೇಂದ್ರ: ಪ್ರತಿ ಸೇವೆಯನ್ನೂ ಒದಗಿಸುವ ಅಧಿಕಾರಿಯನ್ನು ಕಾಯ್ದೆಯಲ್ಲೇ ಗುರುತಿಸಲಾಗಿದೆ. ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಬಳಿಕ ಪರಿಶೀಲನೆ ನಡೆಸಿ, ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಅರ್ಜಿದಾರರು ಈ ಸಂಖ್ಯೆಯನ್ನು ಬಳಸಿಕೊಂಡು `ಸಕಾಲ~ ವೆಬ್‌ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಯ ಬಗ್ಗೆ ನಿರಂತರ ಮಾಹಿತಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ನೆರವು ಒದಗಿಸಲು ಎಲ್ಲ ಪ್ರಮುಖ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.
`ಸಕಾಲ~ ಯೋಜನೆ ಜಾರಿಗಾಗಿ ಸರ್ಕಾರ ಪ್ರತ್ಯೇಕ ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಿದೆ. ವಿದ್ಯುನ್ಮಾನ ಮಾದರಿಯ ಕಡತಗಳು ಲಭ್ಯವಿರುವ ಸೇವೆಗಳು ಬಹುಬೇಗ ಲಭ್ಯವಾಗುತ್ತವೆ. ಎಲ್ಲ ಸೇವೆಗಳಿಗೂ ನಿಗದಿತ ಕಾಲಮಿತಿ ಗೊತ್ತುಪಡಿಸಲಾಗಿದೆ.
ಸೇವೆ ಒದಗಿಸುವ ಅಧಿಕಾರಿ, ಸಕ್ಷಮ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳನ್ನೂ ನಿಗದಿಪಡಿಸಲಾಗಿದೆ. ನಿಗದಿತ ಸೇವೆಯನ್ನು ಸಕಾಲಕ್ಕೆ ನೀಡಲು ವಿಫಲವಾಗುವ ಅಧಿಕಾರಿಗೆ ನಿತ್ಯ 20 ರೂಪಾಯಿಯಂತೆ ಗರಿಷ್ಠ ರೂ 500 ದಂಡ ವಿಧಿಸುವ ಅವಕಾಶವೂ ಈ ಕಾಯ್ದೆಯಲ್ಲಿದೆ. ಈ ಮೊತ್ತವನ್ನು ಅಧಿಕಾರಿಯು ಅರ್ಜಿದಾರನಿಗೆ ಸಂದಾಯ ಮಾಡಬೇಕು.
ರಾಜ್ಯವ್ಯಾಪಿ ಈ ಕಾಯ್ದೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಸರ್ಕಾರವು ಕಾಲ್‌ಸೆಂಟರ್ ಒಂದನ್ನು ಅಸ್ತಿತ್ವಕ್ಕೆ ತಂದಿದೆ. ಕಾಲ್‌ಸೆಂಟರ್‌ನ ದೂರವಾಣಿ ಸಂಖ್ಯೆ 080-44554455ಗೆ ಕರೆಮಾಡಿ ಅರ್ಜಿಗಳ ಸ್ಥಿತಿಗತಿ, ಯೋಜನೆಯ ಪೂರ್ಣ ವಿವರಗಳ ಬಗ್ಗೆ ಮಾಹಿತಿ ಪಡೆಯಬಹುದು.
www.sakala.kar.nic.in ಎಂಬ ವೆಬ್‌ಸೈಟ್ ಕೂಡ ಅಸ್ತಿತ್ವಕ್ಕೆ ತಂದಿದ್ದು, ಯೋಜನೆಯ ಬಗ್ಗೆ ಇಲ್ಲಿ ಸಮಗ್ರ ಮಾಹಿತಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.