ತುಮಕೂರು: `ಸಕಾಲ' ಯೋಜನೆಯಲ್ಲಿ ಮಧ್ಯವರ್ತಿಗಳ ಕಾಟವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರವು ಸಕಾಲ ಕೇಂದ್ರಗಳಿಗೆ ದಿಢೀರ್ ದಾಳಿ ನಡೆಸಿ ಮಧ್ಯವರ್ತಿಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ.
ನಗರದ ಸಕಾಲ ಕೇಂದ್ರದಲ್ಲಿ ಮಧ್ಯವರ್ತಿಗಳ ಕಾಟ ಕುರಿತು ಈಚೆಗಷ್ಟೇ `ಪ್ರಜಾವಾಣಿ' ವರದಿ ಪ್ರಕಟಿಸಿತ್ತು. ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಸಕಾಲ ಕೇಂದ್ರಗಳನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸುವ ಸಲುವಾಗಿ ತನಿಖಾ ತಂಡ ರಚನೆಗೆ ಮುಂದಾಗಿದೆ.
ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, ಸಕಾಲ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಕಾಟ ತಮ್ಮ ಗಮನಕ್ಕೂ ಬಂದಿತ್ತು ಎಂಬುದನ್ನು ಒಪ್ಪಿಕೊಂಡರು.
`ಪ್ರಜಾವಾಣಿ' ವರದಿಯನ್ನು ಗಮನಿಸಿರುವುದಾಗಿ ತಿಳಿಸಿದ ಅವರು, ಇನ್ನೆರಡು ಮೂರು ದಿನಗಳಲ್ಲೇ ತನಿಖಾ ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ರಾಜ್ಯದಾದ್ಯಂತ ಸಕಾಲ ಕೇಂದ್ರಗಳಿಗೆ ಭೇಟಿ ನೀಡಿ ಮಧ್ಯವರ್ತಿಗಳನ್ನು ಪತ್ತೆ ಹಚ್ಚಲಿವೆ. ದಾಳಿ ವೇಳೆ ಸಿಕ್ಕಿಬಿದ್ದ ಮಧ್ಯವರ್ತಿಗಳ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಗೂಗಲ್ ಸಂಸ್ಥೆ ಅಧ್ಯಕ್ಷರು ಸಹ ಸಕಾಲ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕದಂತಹ ದೇಶದಲ್ಲೂ ಇಂತಹ ಯೋಜನೆ ಅಸಾಧ್ಯ ಎಂದು ಸ್ಮರಿಸಿದ್ದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.