ADVERTISEMENT

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ: ಚರ್ಚೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಕೊರತೆಯನ್ನು ನೀಗಿಸಲು ಎಲ್ಲ ರೀತಿಯ ಪ್ರಯತ್ನಕ್ಕೆ ಮುಂದಾಗಿರುವ ಸರ್ಕಾರ, ಸಕ್ಕರೆ ಕಾರ್ಖಾನೆಗಳಿಂದ 250 ಮೆಗಾವಾಟ್ ವಿದ್ಯುತ್ ಖರೀದಿಸುವ ಸಂಬಂಧ ಕಾರ್ಖಾನೆಗಳ ಮಾಲೀಕರೊಂದಿಗೆ ಮಾತುಕತೆ ಆರಂಭಿಸಿದೆ.

ರಾಜ್ಯದ ಕೆಲವೆಡೆ ಮಳೆಯಾಗಿದ್ದರೂ, ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಇರುವುದರಿಂದ ಲೋಡ್‌ಶೆಡ್ಡಿಂಗ್ ಮುಂದುವರಿದಿದೆ. ಈ ಮಧ್ಯೆ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಸರ್ಕಾರ ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಉತ್ಪಾದಿಸುವ 250 ಮೆಗಾವಾಟ್ ವಿದ್ಯುತ್ ಖರೀದಿಸಲು ಮುಂದಾಗಿದೆ.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಇಲ್ಲಿ 38 ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ವಿದ್ಯುತ್ ಖರೀದಿ ಸಂಬಂಧ ಚರ್ಚೆ ನಡೆಸಿದ್ದು, ಯೂನಿಟ್‌ಗೆ ರೂ 6.50 ದರ ನಿಗದಿಪಡಿಸಿದರೆ ವಿದ್ಯುತ್ ನೀಡಲು ಸಿದ್ಧ ಎಂದು ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಆದರೆ ದರ ವಿಚಾರದಲ್ಲಿ ಸರ್ಕಾರ ಚೌಕಾಸಿಗೆ ಮುಂದಾಗಿದೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರಂದ್ಲಾಜೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಚರ್ಚೆ ನಡೆಸಿ 2-3 ದಿನಗಳಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗುವುದು. ಯೂನಿಟ್‌ಗೆ ರೂ 6.50 ನೀಡುವಂತೆ ಕೇಳುತ್ತಿದ್ದಾರೆ. ಆದರೆ ಇಷ್ಟೊಂದು ದರ ನೀಡಲು ಸಾಧ್ಯವಿಲ್ಲ. ಕಡಿಮೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ 450 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಈಗಾಗಲೇ 150 ಮೆಗಾವಾಟ್ ಖರೀದಿ ಮಾಡಲಾಗುತ್ತಿದೆ. ಇನ್ನೂ 250 ಮೆಗಾವಾಟ್ ಲಭ್ಯವಾಗಲಿದ್ದು, ಆ ವಿದ್ಯುತ್ ಅನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆದಿದ್ದು, ಕಾರ್ಖಾನೆಗಳು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು.

ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಯೂನಿಟ್‌ಗೆ ರೂ 2.90, ರೂ 3.50, ರೂ 4 ಸೇರಿದಂತೆ ಬೇರೆ ಬೇರೆ ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಈಗ ರೂ 6.50 ಕೇಳುತ್ತಿರುವುದು ಸರಿಯಲ್ಲ. ಜಿಂದಾಲ್‌ನಿಂದ ಯೂನಿಟ್‌ಗೆ ರೂ 4.26 ದರದಲ್ಲಿ ವಿದ್ಯುತ್ ಖರೀದಿಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಂದ ಅಧಿಕ ದರದಲ್ಲಿ ಖರೀದಿ ಮಾಡಿದರೆ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಒಂದು ಸಾವಿರ ಮೆಗಾವಾಟ್ ವಿದ್ಯುತ್ ಕೊರತೆ ಇದೆ. ಸಕ್ಕರೆ ಕಾರ್ಖಾನೆಗಳಿಂದ 250 ಮೆಗಾವಾಟ್ ಲಭ್ಯವಾದರೆ ಸ್ವಲ್ಪಮಟ್ಟಿಗೆ ನೆರವಾಗಲಿದೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುತ್ತಿದ್ದರೂ, ವಿದ್ಯುತ್ ಮಾರ್ಗದ ಸಮಸ್ಯೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂದರು.

ಆಂಧ್ರಪ್ರದೇಶದ ಸಿಂಗರೇಣಿ ಬದಲು ಬೇರೆ ಕಡೆಯಿಂದ ಕಲ್ಲಿದ್ದಲು ಪೂರೈಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಇದೇ 14ರಂದು ನವದೆಹಲಿಗೆ ಹೋಗಿ ಕೇಂದ್ರದ ಇಂಧನ, ಕಲ್ಲಿದ್ದಲು ಮತ್ತು ರೈಲ್ವೆ ಸಚಿವರನ್ನು ಭೇಟಿಯಾಗಿ ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ, ಕಲ್ಲಿದ್ದಲು ಪೂರೈಕೆಗೆ ಉಂಟಾಗಿರುವ ರೈಲ್ವೆ ಮಾರ್ಗದ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.

ಶಾಮನೂರು ಷುಗರ್ಸ್‌ ಲಿಮಿಟೆಡ್‌ನ ವಿಶೇಷಾಧಿಕಾರಿ ಎಚ್.ಸಿ.ವೆಂಕಟೇಶ್ ಮಾತನಾಡಿ, ಬರುವ ಮೇ ತಿಂಗಳವರೆಗೂ ವಿದ್ಯುತ್ ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಆದರೆ ಯೂನಿಟ್‌ಗೆ ರೂ 6.50 ದರ ನೀಡಬೇಕು. ಇದಕ್ಕೆ ಸರ್ಕಾರ ಒಪ್ಪಿದರೆ ವಿದ್ಯುತ್ ನೀಡಲು ಅಭ್ಯಂತರವಿಲ್ಲ ಎಂದು ಹೇಳಿದರು.

ಬಗೆಹರಿಯುವ ವಿಶ್ವಾಸ: ದೀಪಾವಳಿ ವೇಳೆಗೆ ಕತ್ತಲೆಯ ದಿನಗಳು ದೂರವಾಗಲಿವೆ. ತೆಲಂಗಾಣ ಸಮಸ್ಯೆಯಿಂದಾಗಿ ವಿದ್ಯುತ್ ಕೊರತೆ ಇರುವುದು ನಿಜ. ಅದನ್ನು ಹೋಗಲಾಡಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ನವದೆಹಲಿಗೆ ತೆರಳಿ ಹೆಚ್ಚಿನ ವಿದ್ಯುತ್ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.