ಬೆಂಗಳೂರು: `ನನ್ನ ಬಳಿ ಒತ್ತಡ ತಂತ್ರ ನಡೆಯುದಿಲ್ಲ. ನೀವು ಪದೇ ಪದೇ ನನ್ನ ಮೇಲೆ ಒತ್ತಡ ಹೇರಿ ರಾಜೀನಾಮೆಗೆ ಆಗ್ರಹಿಸುವ ಪ್ರಯತ್ನ ಮಾಡಬೇಡಿ~ ಎಂದು ಮುಖ್ಯಮಂತ್ರಿ ಸದಾನಂದಗೌಡ ಅವರು ಯಡಿಯೂರಪ್ಪ ಆಪ್ತ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, `ನೀವು ರಾಜೀನಾಮೆ ನೀಡುವ ಮೂಲಕ ಯಡಿಯೂರಪ್ಪ ಅವರಿಗೆ ಅವಕಾಶ ಮಾಡಿಕೊಡಬೇಕು~ ಎಂದು ಸಿ.ಎಂಗೆ ಹೇಳಿದರು. ಇದರಿಂದ ಸಿಟ್ಟಿಗೆದ್ದ ಸದಾನಂದಗೌಡ, `ನಿಮ್ಮ ಹಾಗೆ ನಾನು ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುವುದಿಲ್ಲ. ಲಾಬಿಯೂ ಮಾಡುವುದಿಲ್ಲ. ಹೈಕಮಾಂಡ್ ಹೇಳುವವರೆಗೂ ಈ ಸ್ಥಾನದಲ್ಲಿ ಇರುತ್ತೇನೆ. ಅವರು ರಾಜೀನಾಮೆ ಕೊಡಿ ಎಂದರೆ ಒಂದು ಕ್ಷಣ ಕೂಡ ಈ ಸ್ಥಾನದಲ್ಲಿ ಇರುವುದಿಲ್ಲ. ವಿಧಾನಸೌಧದತ್ತ ತಿರುಗಿಯೂ ನೋಡುವುದಿಲ್ಲ~ ಎಂದು ತಿರುಗೇಟು ನೀಡಿದರು ಎನ್ನಲಾಗಿದೆ. ಯಡಿಯೂರಪ್ಪ ವಿರುದ್ಧ ಇನ್ನೂ ಎಂಟು ಪ್ರಕರಣಗಳಿವೆ ಎಂದು ಮುಂಬೈನಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಈ ಮೂವರು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.