ADVERTISEMENT

ಸಚಿವ ತಂಡಕ್ಕೆ ಕಲ್ಲೇಟು: ಗಾಳಿಯಲ್ಲಿ ಗುಂಡು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:20 IST
Last Updated 17 ಫೆಬ್ರುವರಿ 2011, 18:20 IST

ಬೆಳಗಾವಿ: ತಾಲ್ಲೂಕಿನ ಕರಾವಿ ಗುಡ್ಡ ಪ್ರದೇಶದಲ್ಲಿರುವ ಕಳ್ಳಬಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಲು ಮುಂದಾದ ಅಬಕಾರಿ ಸಚಿವ ರೇಣುಕಾಚಾರ್ಯ ಹಾಗೂ ಇಲಾಖೆಯ ಅಧಿಕಾರಿಗಳ ಮೇಲೆ ಕಳ್ಳಬಟ್ಟಿ ತಯಾರಕರು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಗುರುವಾರ ಇಲ್ಲಿ ನಡೆಯಿತು.

ಕಳ್ಳಬಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಬೆಳಗಾವಿ ಹೊರವಲಯದ ಕರಾವಿ ಗುಡ್ಡಕ್ಕೆ ತೆರಳುತ್ತಿದ್ದ ಸಚಿವರು ಹಾಗೂ ಅಧಿಕಾರಿಗಳ ಮೇಲೆ ಕಳ್ಳಬಟ್ಟಿ ತಯಾರಿಸುತ್ತಿದ್ದ 50ಕ್ಕೂ ಹೆಚ್ಚು ಮಂದಿ ಯುವಕರು ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳಾದ ವಿ.ಎನ್. ನಾಯಕ, ಛಾಯಾ ಅಂಗಡಿ, ವಿಜಯ ಹಿರೇಮಠ, ವಿನೋದ ಡಾಂಗೆ ಸೇರಿದಂತೆ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಆತಂಕ: ಗುಡ್ಡದ ಕೆಳಭಾಗದಿಂದ ಏಕಾಏಕಿ ಕಲ್ಲು ತೂರಾಟ ನಡೆದಿದ್ದರಿಂದ ಸಚಿವರು ಹಾಗೂ ಮಾಧ್ಯಮ ತಂಡ ವಿಚಲಿತವಾಯಿತು. ಮುಂಚೂಣಿಯಲ್ಲಿದ್ದ ಅಬಕಾರಿ ಸಿಬ್ಬಂದಿ ಲಾಠಿ ಮಾತ್ರ ಹೊಂದಿದ್ದರು. ಅವರೆಲ್ಲ ಹಿಂದಕ್ಕೆ ಓಡಿ ಬರುತ್ತಿದ್ದಂತೆಯೇ ಸಚಿವ ರೇಣುಕಾಚಾರ್ಯ ಅವರು ‘ಕಳ್ಳಬಟ್ಟಿ ತಯಾಕರನ್ನು ಬಿಡಬೇಡಿ, ಪ್ರತಿ ದಾಳಿ ನಡೆಸಿ’ ಎಂದು ಕೂಗುತ್ತಿದ್ದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡು ಗುಂಡು ಹಾರಿಸುವಂತೆ ಆಜ್ಞಾಪಿಸಿದರು.

ಆದರೆ ಕೆಲವು ಸಬ್ ಇನ್‌ಸ್ಪೆಕ್ಟರ್‌ಗಳ ಬಳಿ ರಿವಾಲ್ವರ್ ಇರಲಿಲ್ಲ. ಇದ್ದವರೂ ಮೇಲಾಧಿಕಾರಿಗಳ ಆದೇಶ ಇಲ್ಲದ್ದರಿಂದ ಆರಂಭದಲ್ಲಿ ಗುಂಡು ಹಾರಿಸಲು ಹಿಂದೇಟು ಹಾಕಿದರು. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗ ಕಳ್ಳಬಟ್ಟಿ ತಯಾರಕರು ಹಿಂದಕ್ಕೆ ಓಡಿದರು.

ಕಲ್ಲು ತೂರಾಟ ಘಟನೆಯಿಂದ ಸಿಟ್ಟಿಗೆದ್ದ ಸಚಿವರು, ಆರೋಪಿಗಳನ್ನು ಬಂಧಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.
ಹೆಚ್ಚುವರಿ ಪಡೆ: ಕಲ್ಲು ತೂರಾಟದ ವಿಷಯ ಗೊತ್ತಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಅವರು ಸಶಸ್ತ್ರ ಮೀಸಲು ಪಡೆಯೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು. ಸಶಸ್ತ್ರದೊಂದಿಗೆ ಮುನ್ನುಗ್ಗಿದ ಪೊಲೀಸರು ಹತ್ತಕ್ಕೂ ಹೆಚ್ಚು ಜನರು ಬಂಧಿಸಿ, ಆರು ಲಕ್ಷ ರೂಪಾಯಿ ಬೆಲೆ ಬಾಳುವ ಮದ್ಯ ನಾಶಪಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಕಳ್ಳಬಟ್ಟಿ ದಂಧೆಗೆ ಶಾಶ್ವತ ಕಡಿವಾಣ ಹಾಕಲಾಗುವುದು. ಇದರ ಹಿಂದಿರುವ ಶಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು; ಇಂತಹ ಘಟನೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ರಾಜ್ಯದಾದ್ಯಂತ ಕಳ್ಳಬಟ್ಟಿ ಸಾರಾಯಿಯನ್ನು ತಡೆಗಟ್ಟಲಾಗುವುದು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.