ADVERTISEMENT

ಸಚಿವ ಸ್ಥಾನ: ಸಮುದಾಯಗಳ ಪಟ್ಟು

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:11 IST
Last Updated 7 ಜೂನ್ 2018, 19:11 IST

ಬೆಂಗಳೂರು: ತಮ್ಮ ಸಮಾಜದ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾರ್ಯಕರ್ತರು ಹಾಗೂ ಆಯಾ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಲು ಆಗ್ರಹ : ‘ಜನಪರ ಸೇವೆ ಸಲ್ಲಿಸಿದ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಕರ್ನಾಟಕ ರೆಡ್ಡಿ ಸಮುದಾಯದ ಮುಖಂಡರು ಆಗ್ರಹಿಸಿದರು.

‘ಸತತ ಏಳು ಬಾರಿ ಗೆದ್ದಿರುವ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೇ ಕಾಂಗ್ರೆಸ್‌ ಕಡೆಗಣಿಸಿದೆ’ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ಎಚ್‌.ಎನ್‌.ವಿಜಯ ರಾಘವರೆಡ್ಡಿ ದೂರಿದರು.

ADVERTISEMENT

ರೋಷನ್‌ ಬೇಗ್‌ಗೆ ಸಚಿವ ಸ್ಥಾನಕ್ಕೆ ಆಗ್ರಹ: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ‍ಮುಸ್ಲಿಂ ಸಮುದಾಯಕ್ಕೆ ಮತ್ತಷ್ಟು ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮುಖಂಡರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಟ್ಕಳ ಮಜಲೀಸ್‌ ಇಸ್ಲಾಹ್‌ ಓ ತನ್ಝೀಂ ಅಧ್ಯಕ್ಷ ಮಾತನಾಡಿ, ‘ಶಾಸಕ ರೋಷನ್‌ ಬೇಗ್ ಅವರನ್ನು ಉಪಮುಖ್ಯಮಂತ್ರಿ ಮಾಡ
ಬೇಕೆಂದು ರಾಜ್ಯ ಮುಸ್ಲಿಂ ಸಂಘಟನೆಗಳು ಒತ್ತಾಯಿಸಿದ್ದವು. ಆದರೆ, ಸಚಿವ ಸ್ಥಾನವನ್ನೂ ನೀಡಿಲ್ಲ’ ಎಂದರು.

ಕುರುಬ ಸಮಾಜ: ಕಾಂಗ್ರೆಸ್‌ನಿಂದ ಕುರುಬ ಸಮುದಾಯದ ಇಬ್ಬರು ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನಗಳನ್ನು ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮುಖಂಡರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಯಮನಪ್ಪ ಸಣ್ಣಕ್ಕಿ ಮಾತನಾಡಿ, ‘ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ಕನಿಷ್ಠ ಮೂರು ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕಿತ್ತು. ಈ ಅನ್ಯಾಯವನ್ನು ಖಂಡಿಸಿ ಜೂ.8ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿ ಮುಂಭಾಗ ಧರಣಿ ಹಮ್ಮಿಕೊಂಡಿದ್ದೇವೆ’ ಎಂದರು.

ಮಾದಿಗ ಸಮಾಜ: ಮಾದಿಗ ಜನಾಂಗದಿಂದ ಶಾಸಕಿಯಾಗಿ ಆಯ್ಕೆಯಾದ ರೂಪಾ ಶಶಿಧರ್‌ ಅವರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಮಾದಿಗ ದಂಡೋರ ಸಮಿತಿ ಜನಾಂಗದ ಮುಖಂಡರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಉಸ್ತುವಾರಿ ಕೋಲಾ ವೆಂಕಟೇಶ್‌ ಮಾತನಾಡಿ, ‘ಕಾಂಗ್ರೆಸ್‌ ನಮ್ಮ ಜನಾಂಗವನ್ನು ಕಡೆಗಣಿಸುತ್ತಿದೆ. ಕೇವಲ ಓಟ್‌ ಬ್ಯಾಂಕ್‌ಗಾಗಿ  ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ. ಪರಿಷತ್‌ ಸದಸ್ಯರಾದ ಆರ್‌.ಬಿ.ತಿಮ್ಮಾಪುರ ಮತ್ತು ಆರ್‌.ಧರ್ಮಸೇನ ಅವರಿಗೂ ಸಂಪುಟದಲ್ಲಿ ಆದ್ಯತೆ ನೀಡಬೇಕು’ ಎಂದರು.

ಬಂಜಾರ ಸಮುದಾಯ: ಸಮಾಜದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘ ಒತ್ತಾಯಿಸಿತು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಡಿ.ಪರಮೇಶ್ವರ ನಾಯ್ಕ ಮಾತನಾಡಿ, ‘ಜೂ.14ರಂದು ರಾಜ್ಯದಾದ್ಯಂತ ಧರಣಿ ನಡೆಸಲಾಗುವುದು’ ಎಂದರು.

50 ಪದಾಧಿಕಾರಿಗಳಿಂದ ಸಾಮೂಹಿಕ ರಾಜೀನಾಮೆ: ಸಚಿವ ಸಂಪುಟದಲ್ಲಿ ಶಾಸಕ ಎಂ.ಬಿ.ಪಾಟೀಲ ಅವರಿಗೆ ಸ್ಥಾನ ನೀಡ‌ದ ಕಾರಣಕ್ಕೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಾನು ಸೇರಿದಂತೆ 50 ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಹೇಳಿದರು.

ಭುಗಿಲೆದ್ದ ಆಕ್ರೋಶ
ಹೊಸಕೋಟೆ: ಶಾಸಕ ಎನ್.ನಾಗರಾಜು ಅವರಿಗೆ ಸಚಿವ ಸ್ಥಾನ ನೀಡದಿರುವುದು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ತಾವರೆಕೆರೆ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಅಭಿಮಾನಿಗಳು ಗುರುವಾರ ಹೆದ್ದಾರಿ 75ರಲ್ಲಿ ರಸ್ತೆ ತಡೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.