ADVERTISEMENT

ಸತತ ಗೆಲುವು ನೀಡದ ಕುಷ್ಟಗಿ

ಭೀಮಸೇನ ಚಳಗೇರಿ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಕ್ಷೇತ್ರ ವಿಶೇಷ

ಕೊಪ್ಪಳ: ಒಮ್ಮೆ ಶಾಸಕರಾಗಿ ಆಯ್ಕೆಗೊಂಡಿರುವ ಅಭ್ಯರ್ಥಿಯು ಅವಧಿ ಮುಗಿದ ತಕ್ಷಣ ನಡೆದ ಚುನಾವಣೆಯಲ್ಲಿ ಮರು ಆಯ್ಕೆಗೊಂಡಿಲ್ಲ. ಇದು ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವೈಶಿಷ್ಟ್ಯ.

1957ರಿಂದ ಈ ವರೆಗೆ ನಡೆದಿರುವ ಚುನಾವಣೆಗಳಲ್ಲಿ ಮೂವರು ಮಾತ್ರ ಮರು ಆಯ್ಕೆಗೊಂಡಿದ್ದಾರೆ. ಆದರೆ, ಒಂದು ಅವಧಿಯ ಅಂತರದ ನಂತರ ಗೆದ್ದಿರುವುದು ಗಮನಾರ್ಹ.

1957ರಲ್ಲಿ ಪುಂಡಲೀಕಪ್ಪ ಜ್ಞಾನಮೋಠೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಗೊಂಡಿದ್ದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಜ್ಞಾನಮೋಠೆ ಅವರು ಕಾಂತಾರಾವ್  ವಿರುದ್ಧ ಪರಾಭವಗೊಂಡರು. 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪುಂಡಲೀಕಪ್ಪ ಜ್ಞಾನಮೋಠೆ ಅವರು ಪಕ್ಷೇತರ ಅಭ್ಯರ್ಥಿ ವಿ.ರಾಜಪ್ಪಯ್ಯ ಅವರನ್ನು ಸೋಲಿಸಿ ಮತ್ತೆ ವಿಧಾನಸಭೆ  ಪ್ರವೇಶಿಸಿದ್ದರು.

1972ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಾಂತಾರಾವ್ ದೇಸಾಯಿ ಅವರಿಗೆ ಕ್ಷೇತ್ರದ ಮತದಾರರು ಮಣೆ ಹಾಕಿದ್ದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ಗಂಗಣ್ಣ ಅವರು ಕಾಂಗ್ರೆಸ್‌ನಿಂದ ಜಯಶಾಲಿಯಾಗಿದ್ದರು.  1994ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಪರಾಭವಗೊಂಡರು.

1983ರಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿಯನ್ನು ಕ್ಷೇತ್ರದ ಮತದಾರರು ಗೆಲ್ಲಿಸಿದರು. ಕಾಂಗ್ರೆಸ್‌ನ ಹನುಮಗೌಡ ಪಾಟೀಲ ಅವರು ಶಾಸಕರಾಗಿ ಆಯ್ಕೆಯಾದರು. ನಂತರ 1985ರಲ್ಲಿ ನಡೆದ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಹನುಮಗೌಡ ಪಾಟೀಲ ಅವರು ಜನತಾ ಪಕ್ಷದ ಎಂ.ಎಸ್.ಪಾಟೀಲ ವಿರುದ್ಧ ಪರಾಭವಗೊಂಡರು. 1989ರಲ್ಲಿ ಹನುಮಗೌಡ ಪಾಟೀಲ ಅವರನ್ನೇ ಕ್ಷೇತ್ರದ ಮತದಾರರು ಆರಿಸಿ ವಿಧಾನಸಭೆಗೆ ಕಳಿಸುವ ಮೂಲಕ ಶಾಸಕರಾಗಿ ಆಯ್ಕೆಯಾದವರನ್ನು  ಒಂದು ಅವಧಿಯ ಅಂತರದ ನಂತರ ಗೆಲ್ಲಿಸುವ ಚುನಾವಣಾ ಪರಂಪರೆ  ಮುಂದುವರಿಸಿದರು.

1994ರಿಂದ 2008ರ ವರೆಗೆ ನಡೆದಿರುವ ನಾಲ್ಕು ಚುನಾವಣೆಗಳಲ್ಲಿ ಮಾತ್ರ, ಪುನಃ ಸ್ಪರ್ಧಿಸಿದವರು ಸಹ ಗೆದ್ದಿಲ್ಲ ಎಂಬುದು ವಿಶೇಷ.1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಕೆ.ಶರಣಪ್ಪ ಆಯ್ಕೆಗೊಂಡಿದ್ದರು. 1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಶರಣಪ್ಪ ಕಾಂಗ್ರೆಸ್‌ನ ಹಸನ್‌ಸಾಬ ದೋಟಿಹಾಳ ಅವರ ವಿರುದ್ಧ ಪರಾಭವಗೊಂಡಿದ್ದರು. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾಳೆಯ ಸೇರಿದ್ದ ಕೆ.ಶರಣಪ್ಪ ಈಚೆಗೆ ಪುನಃ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಬಾರಿ ಜೆಡಿಎಸ್‌ನಿಂದ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಆ ಮೂಲಕ ಶರಣಪ್ಪ ಅವರು ಮತ್ತೊಮ್ಮೆ ತಮ್ಮ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ.

2004ರಲ್ಲಿ ದೊಡ್ಡನಗೌಡ ಪಾಟೀಲ ಅವರು ಬಿಜೆಪಿಯಿಂದ ವಿಜಯಶಾಲಿಯಾಗುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲು ಕಾರಣರಾದರು. ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಹನುಮಗೌಡ ಪಾಟೀಲ ಅವರ ಪುತ್ರರೂ ಆಗಿರುವ ದೊಡ್ಡನಗೌಡ ಪಾಟೀಲ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.  2008ರಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ ಮತದಾರರು ಅಮರೇಗೌಡ ಬಯ್ಯಾಪುರ ಅವರನ್ನು ಆರಿಸಿ ಕಳಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಅಮರೇಗೌಡ ಬಯ್ಯಾಪುರ ಅವರು ಸ್ಪರ್ಧಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಅಮರೇಗೌಡ ಅವರನ್ನು ಗೆಲ್ಲಿಸಿದ್ದೇ ಆದಲ್ಲಿ ಕುಷ್ಟಗಿ ಮತಕ್ಷೇತ್ರದ ಮಟ್ಟಿಗೆ ಹೊಸ ದಾಖಲೆಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT