ADVERTISEMENT

ಸದನ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಯಾವಾಗಲೂ `ನೆರಳು~
ಭ್ರಷ್ಟಾಚಾರ, ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳು ಯಾವಾಗಲೂ ಸುರಕ್ಷಿತವಾಗಿ ಇರುತ್ತಾರೆ. ಶಾಸಕರು, ಸಚಿವರು ಮಾತ್ರ ಸಾಲು ಸಾಲಾಗಿ ಜೈಲಿಗೆ ಹೋಗಬೇಕಾಗಿರುವುದು ಸರಿಯೇ?

ವಿಧಾನ ಪರಿಷತ್‌ನಲ್ಲಿ ಶಕ್ರವಾರ ಹೀಗೆ ಪ್ರಶ್ನಿಸಿದವರು ಜೆಡಿಎಸ್ ಸದಸ್ಯ ಅಬ್ದುಲ್ ಅಜೀಂ. ಐಎಫ್‌ಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪವಾದಾಗ ಮಾತನಾಡಿದ ಅವರು, ಅಧಿಕಾರಿಗಳು ಯಾವಾಗಲೂ `ನೆರಳಿ~ನಲ್ಲೇ ಇರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಭಾಂಗಣದ ಮುಂದಿನ ಸಾಲಿನಲ್ಲಿ ಜನ ಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಇತ್ತು. ಹಿಂದೆ ಅಧಿಕಾರಿಗಳು ಮತ್ತು ಅವರ ಕುಟುಂಬದವರಿದ್ದರು.

ಬಿಸಿಲು ಜಾಸ್ತಿಯಾದಾಗ ಜನಪ್ರತಿನಿಧಿಗಳೇ ಬೇಗೆ ಅನುಭವಿಸಬೇಕಾಯಿತು. ಅಧಿಕಾರಿಗಳು ಆರಾಮವಾಗಿದ್ದರು. ಭ್ರಷ್ಟಾಚಾರದ ವಿಷಯದಲ್ಲೂ ಹೀಗೆಯೇ ಅವರು ಯಾವಾಗಲೂ `ನೆರಳಿ~ನಲ್ಲೇ ಇರುತ್ತಾರೆ ಎಂದರು.

`ಹೊಡೆಯಲು ಬರುತ್ತೆ~
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ನ ನಿರ್ವಾಹಕಿಯೊಬ್ಬರ ಮೇಲೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಹಲ್ಲೆ ಮಾಡಿದ ಘಟನೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ವಿರೋಧಪಕ್ಷದ ನಾಯಕಿ ಮೋಟಮ್ಮ, `ನಮಗೂ ಹೊಡೆಯಲು ಬರುತ್ತೆ~ ಎಂದು ಸರ್ಕಾರವನ್ನೇ ಹೆದರಿಸಿದರು!

ಮಾಗಡಿ ರಸ್ತೆಯಲ್ಲಿ ಬಸ್ ನಿಲುಗಡೆ ಸಂಬಂಧ ಮಂಗಳವಾರ ವಾಗ್ವಾದ ನಡೆಸಿದ್ದ ಎಸ್‌ಐ ಒಬ್ಬರು ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದ್ದರು.

ಈ ಕುರಿತು ಸದನದಲ್ಲಿ ಪ್ರಸ್ತಾಪಿಸಿದ ಮೋಟಮ್ಮ, ಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಮಹಿಳೆಯರಿಗೂ ಹೊಡೆಯಲು ಬರುತ್ತೆ ಎಂದು ವ್ಯಂಗ್ಯವಾಗಿಯೇ ಪ್ರಸ್ತಾಪಿಸಿದರು.

`ಹಾಗಾದರೆ ನಾವು ರಕ್ಷಣೆ ಕೇಳಬೇಕಾಗುತ್ತದೆ~ ಎಂದು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಕ್ರಿಯಿಸಿದಾಗ ಸದನದಲ್ಲಿ ನಗೆಯ ಅಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.