ADVERTISEMENT

ಸನ್ಮಾನ ಒಲ್ಲದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST

ಬೆಂಗಳೂರು: ಸಭೆ ಸಮಾರಂಭಗಳಲ್ಲಿ ಸನ್ಮಾನ ಮಾಡಿಸಿಕೊಳ್ಳದಿರಲು ಹಾಗೂ ಹಾರ,  ತುರಾಯಿ ಸ್ವೀಕರಿಸದೇ ಇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸನ್ಮಾನಿಸಲು ಬಂದ ಅಭಿಮಾನಿಗಳ ಎದುರೇ ಅವರು ಈ ಇಂಗಿತ ಹೊರಹಾಕಿದ್ದಾರೆ.

ಕುಮಾರ ಪಾರ್ಕ್‌ನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದ ಪಕ್ಕದ ಬಂಗಲೆಯಲ್ಲಿ ಸಾರ್ವಜನಿಕರ ಭೇಟಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸಿದ್ದರಾಮಯ್ಯ ಪ್ರತಿದಿನವೂ ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದಾರೆ. ಸೋಮವಾರ ಬಂದ ಕೆಲ ಅಭಿಮಾನಿಗಳು ಸನ್ಮಾನಿಸಲು ಮುಂದಾದಾಗ ನಯವಾಗಿಯೇ ನಿರಾಕರಿಸಿದರು. ಎಷ್ಟೇ ಒತ್ತಾಯಿಸಿದರೂ ಹಾರ ಹಾಕಿಸಿಕೊಳ್ಳಲಿಲ್ಲ. ಮೈಸೂರು ಪೇಟವನ್ನೂ ತೊಡಿಸಲು ಬಿಡಲಿಲ್ಲ.

ಕಾಲಿ ಬಿದ್ದಾಗ ಕೋಪ: ಸಮಸ್ಯೆ ಹೇಳಿಕೊಳ್ಳಲು ಬಂದ ಕೆಲವರು ಮುಖ್ಯಮಂತ್ರಿಯ ಕಾಲಿಗೆ ಬಿದ್ದು ನೆರವು ಕೇಳಲು ಪ್ರಯತ್ನಿಸಿದರು. ಆಗ ಸಿದ್ದರಾಮಯ್ಯ ಸಿಟ್ಟಾದರು. `ಹೀಗೆಲ್ಲಾ ಮಾಡಬಾರದು. ನಿಮ್ಮ ಸಮಸ್ಯೆ ಏನು ಎಂಬುದನ್ನು ಹೇಳಿ, ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿ' ಎಂದು ಸಮಾಧಾನ ಹೇಳಿದರು.

ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಿಗಮ, ಮಂಡಳಿಗಳಿಗೆ ತಮ್ಮನ್ನು ನೇಮಿಸುವಂತೆ ಮನವಿ ಸಲ್ಲಿಸಿದರು. ಬಜೆಟ್ ಅಧಿವೇಶನ ಮುಗಿದ ಬಳಿಕ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ, ಅವರನ್ನು ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.