ADVERTISEMENT

‘ಸಭಾಪತಿ ಹುದ್ದೆಯ ಗೌರವಕ್ಕೆ ಚ್ಯುತಿ’

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪತ್ರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
‘ಸಭಾಪತಿ ಹುದ್ದೆಯ ಗೌರವಕ್ಕೆ ಚ್ಯುತಿ’
‘ಸಭಾಪತಿ ಹುದ್ದೆಯ ಗೌರವಕ್ಕೆ ಚ್ಯುತಿ’   

ಹುಬ್ಬಳ್ಳಿ: ‘ವಿಧಾನಸೌಧ ಕಟ್ಟಡ ನಿರ್ಮಾಣದ ವಜ್ರಮಹೋತ್ಸವ ಆಚರಿಸುವ ಸಂಬಂಧ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್‌ ಸಭಾಪತಿಯವರು ಮುಖ್ಯಮಂತ್ರಿ ಮನೆಗೆ ಹೋಗಿ ಸಾಮಾನ್ಯರಂತೆ ಕುಳಿತು ಮನವಿ ಸಲ್ಲಿಸಿರುವ ದೃಶ್ಯ ಕಂಡು ಮನಸಿಗೆ ನೋವಾಗಿದೆ’ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರಿಗೆ ಈ ಸಂಬಂಧ ಪತ್ರ ಬರೆದಿರುವ ಹೊರಟ್ಟಿ, ‘ವಿಧಾನಮಂಡಲ ಸಂವಿಧಾನದಿಂದ ರಚಿತವಾಗಿದೆ. ₹26 ಕೋಟಿ ಹಣಕ್ಕಿಂತ ತಾವು ಕುಳಿತ ಪೀಠಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿ ಇದ್ದಾರೆಂಬುದನ್ನು ಮರೆತು ಈ ರೀತಿ ವರ್ತಿಸಬಾರದಿತ್ತು. ನಮ್ಮ ಸಂವಿಧಾನದ ಪ್ರಕಾರ, ರಾಜ್ಯದಲ್ಲಿ ರಾಜ್ಯಪಾಲರ ನಂತರದ ಹುದ್ದೆಯೇ ಸಭಾಪತಿಯದ್ದು. ಅದರ ನಂತರದ ಸ್ಥಾನ ಮುಖ್ಯಮಂತ್ರಿಯದ್ದು. ಆದರೆ, ನೀವೇ ಮುಖ್ಯಮಂತ್ರಿಯ ಬಳಿ ಹೋಗಿದ್ದು ಸರಿಯಲ್ಲ. ಇದರಿಂದ ತಮ್ಮ ಹುದ್ದೆಯ ಗೌರವಕ್ಕೆ ಚ್ಯುತಿ ತಂದಂತಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಈ ಹಿಂದೆ ಶಾಸಕರಿಗೆ ಕಂಪ್ಯೂಟರ್‌ ಕೊಟ್ಟಿರಲಿಲ್ಲವೆ ಎಂದು ನೀವು ಸಮರ್ಥಿಸಿಕೊಂಡಿದ್ದೀರಿ. 2011ರಲ್ಲಿ ಅಲೈಯನ್ಸ್‌ ವಿಶ್ವವಿದ್ಯಾಲಯದಲ್ಲಿ ಪ್ರಶಿಕ್ಷಣ ಶಿಬಿರ ಏರ್ಪಡಿಸಿದ್ದಾಗ, ₹45,493 ಮೊತ್ತದ ಐಪ್ಯಾಡ್‌ಗಳನ್ನು ನೀಡಲಾಗಿತ್ತು. ಆಗ ಕಂಪ್ಯೂಟರ್‌ ಯುಗ ಪ್ರಾರಂಭವಾಗಿತ್ತು. ಶಾಸಕರು ಕಡ್ಡಾಯವಾಗಿ ಕಂಪ್ಯೂಟರ್‌ ಕಲಿಯಬೇಕು ಎಂಬ ಉದ್ದೇಶದಿಂದ, ಕಂಪ್ಯೂಟರ್‌ ಉಪಯೋಗಿಸುವುದಕ್ಕೆ ಸಹಾಯವಾಗಲಿ ಎಂದು ಇವುಗಳನ್ನು ವಿತರಿಸಲಾಗಿತ್ತು ಎಂಬುದನ್ನು ತಾವು ಅರ್ಥಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಚರ್ಚೆಗೆ ಗ್ರಾಸವಾಗದಿರಿ:
‘ವಿಧಾನಸೌಧದ ಸುತ್ತ ಭದ್ರತೆಗಾಗಿ ₹18 ಕೋಟಿ ಖರ್ಚು ಮಾಡಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದು ಹಾಗೂ ಬೇರೆ ರೀತಿಯ ಭದ್ರತಾ ವ್ಯವಸ್ಥೆ ರೂಪಿಸುವ ಪ್ರಯತ್ನ ನಡೆದಿದೆ. ಈ ಹಿಂದೆ, ಈ ವ್ಯವಸ್ಥೆ ಮಾಡಲು ₹2.8 ಕೋಟಿ ಅಂದಾಜು ವೆಚ್ಚವಾಗುತ್ತದೆ ಎಂದು ವರದಿ ನೀಡಲಾಗಿತ್ತು. ಅಲ್ಲದೆ, ಈಗಾಗಲೇ ವಿಧಾನ ಪರಿಷತ್‌ ಹಾಗೂ ಶಾಸಕರ ಭವನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದಕ್ಕೆ ₹84 ಲಕ್ಷ ಖರ್ಚಾಗಿದೆ. ಈ ವ್ಯವಸ್ಥೆಯೇ ಉತ್ತಮವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಜೈಲಿನಲ್ಲಿರುವ ಕೈದಿಗಳನ್ನು ಭೇಟಿಯಾಗಲು ಇರುವ ವ್ಯವಸ್ಥೆಯನ್ನೇ ಇಲ್ಲಿಯೂ ತರುವ ಹುನ್ನಾರ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ಸಾರ್ವಜನಿಕರು ವಿಧಾನಸೌಧ ಹಾಗೂ ಶಾಸಕರ ಭವನಕ್ಕೆ ಭೇಟಿ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ವಿಷಯ ಸಾರ್ವಜನಿಕರ ಮುಂದೆ ಚರ್ಚೆಗೆ ಗ್ರಾಸವಾಗುವ ಮೊದಲು ತಜ್ಞರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ’ ಎಂದು ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.