ADVERTISEMENT

ಸಮಾವೇಶಕ್ಕೆ ಅರ್ಥಪೂರ್ಣ ತೆರೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2013, 19:59 IST
Last Updated 27 ಜನವರಿ 2013, 19:59 IST
`ಪ್ರಜಾವಾಣಿ' ಓದುವುದರಲ್ಲಿ ತಲ್ಲೆನರಾಗಿರುವ ಡಾ. ಗಿರೀಶ ಕಾರ್ನಾಡ
`ಪ್ರಜಾವಾಣಿ' ಓದುವುದರಲ್ಲಿ ತಲ್ಲೆನರಾಗಿರುವ ಡಾ. ಗಿರೀಶ ಕಾರ್ನಾಡ   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಬೆಟ್ಟದ ಆಚೆ ಕೆಂಬಣ್ಣದ ನೇಸರ ಭಾನುವಾರ ಸಂಜೆ ನೇಪಥ್ಯಕ್ಕೆ ಸರಿಯುತ್ತಿದ್ದಂತೆ ವಿ.ವಿ.ಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮೂರು ದಿನಗಳಿಂದ ಆಯೋಜಿತವಾಗಿದ್ದ `ಧಾರವಾಡ ಸಾಹಿತ್ಯ ಸಂಭ್ರಮ' ಅರ್ಥಪೂರ್ಣವಾಗಿ ಸಮಾರೋಪಗೊಂಡಿತು.

ಮೂರು ದಿನಗಳಿಂದ ನಡೆದ ಗೋಷ್ಠಿಯಲ್ಲಿ ಭಾಗವಹಿಸಿದವರು ಮತ್ತೆ ಮರು ವರ್ಷ ಸೇರುವ ಉತ್ಸಾಹದಿಂದ ಹೊರನಡೆದರು. ಸಾಹಿತ್ಯ ಕ್ಷೇತ್ರದ ದಿಗ್ಗಜರು ವೇದಿಕೆಯಲ್ಲಿ ಜೊತೆಗೂಡಿ ತೆಗೆಸಿಕೊಂಡ ಫೋಟೊ ಒಟ್ಟೂ ಸಂಭ್ರಮದ ಕಳೆಯನ್ನು ಹೆಚ್ಚಿಸಿತು.
ಸಮಾರೋಪದಲ್ಲಿ ಮೂರು ದಿನಗಳ ಬಹುತೇಕ ಎಲ್ಲ ಗೋಷ್ಠಿಗಳನ್ನೂ ಸಮೀಕ್ಷೆಗೆ ಒಳಪಡಿಸಿದವರು ಖ್ಯಾತ ವಿಮರ್ಶಕ ಡಾ.ಟಿ.ಪಿ.ಅಶೋಕ.

`ಸಾಹಿತ್ಯ ಸಂಭ್ರಮದ ಆರಂಭ ಇಷ್ಟೊಂದು ಹುರುಪಿನಿಂದ ನಡೆಯುತ್ತದೆ ಎಂದು ನಾನು ಅಂದುಕೊಂಡೇ ಇರಲಿಲ್ಲ' ಎಂದು ಮಾತು ಆರಂಭಿಸಿದ ಅವರು, `ಬೆಂಗಳೂರಿನಲ್ಲಿ ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಇತ್ತೀಚೆಗೆ ಅಲ್ಲಿ ಆಯೋಜಿಸಿದ್ದ ಜ್ಞಾನಪೀಠ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ನಾಲ್ಕು ಜನ ಜ್ಞಾನಪೀಠ ಸಾಹಿತಿಗಳಿದ್ದರೆ, ವೇದಿಕೆಯ ಮುಂಭಾಗದಲ್ಲಿದ್ದವರು ಕೇವಲ 14 ಜನ ಮಾತ್ರ. ಆದರೆ ಧಾರವಾಡದಲ್ಲಿ ಇಡೀ ಸಭಾಂಗಣ ಸಾಹಿತ್ಯಾಸಕ್ತರಿಂದ ತುಂಬಿತ್ತು' ಎಂದರು.

`ಗೋಷ್ಠಿಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಆದರೆ ಅವು ಹೃದಯದಲ್ಲಿ ಕಹಿ ಭಾವನೆಗಳನ್ನು ಬೆಳೆಸಲಿಲ್ಲ. ಅಷ್ಟರ ಮಟ್ಟಿಗೆ ಆರೋಗ್ಯಪೂರ್ಣ ಚರ್ಚೆ ಸಾಧ್ಯವಾಗಿದೆ. ಯುವ ಲೇಖಕರಿಗೆ ಒಂದು ಗೋಷ್ಠಿಯನ್ನು ಸಂಘಟಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು' ಎಂದು ಅವರು ತಿಳಿಸಿದರು.

`ಇಂತಹ ಸಾಹಿತ್ಯ ಸಂಭ್ರಮಗಳು ಗುಲ್ಬರ್ಗ, ಶಿವಮೊಗ್ಗದಂತಹ ನಗರಗಳಲ್ಲಿಯೂ ನಡೆಯಬೇಕು' ಎಂದು ಅವರು ಸಲಹೆ ನೀಡಿದರು.
ಸಮಾರೋಪ ಭಾಷಣ ಮಾಡಿದ ಹಿರಿಯ ವಿಮರ್ಶಕ ಜಿ.ಎಚ್.ನಾಯಕ, `ಸಂಭ್ರಮದ ಸಂಘಟಕರು ನಿಬಂಧನೆಗಳನ್ನು ವಿಧಿಸಿದ ಬಗ್ಗೆ ಪತ್ರದಲ್ಲಿ ತಿಳಿದು ಬೇಸರವಾಗಿತ್ತು. ಹಲವು ಮಂದಿ ಹಿರಿಯ ಸಾಹಿತಿಗಳು ಸಂಘಟಕರಾಗಿರುವ ಇದರಲ್ಲಿ ಅವರು ಹುಕುಂತನ ತೋರುತ್ತಿದ್ದಾರಲ್ಲ ಎಂದು ತಿಳಿದಾಗ ಹೇಗೆ ಭಾಗವಹಿಸಬೇಕು ಎಂಬ ದುಗುಡ ಆವರಿಸಿತ್ತು.

ಆದರೆ ನಿಬಂಧನೆಗಳನ್ನು ತೆಗೆದುಹಾಕಿದಾಗ ಸಂತಸದಿಂದ ಭಾಗವಹಿಸಿದೆ. ಇದೊಂದು ಬಗೆಯಲ್ಲಿ ಸಾಹಿತ್ಯದ ಪುನಶ್ಚೇತನ ಶಿಬಿರದ ಅನುಭವ ನೀಡಿತು' ಎಂದು ಅಭಿಪ್ರಾಯಪಟ್ಟರು.

`1953ರಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಆದರೆ ಇತ್ತೀಚಿನ ಸಮ್ಮೇಳನಗಳನ್ನು ನೋಡಿದಾಗ ಅವುಗಳಿಂದ ಕಲಿಯುವುದು ಏನೂ ಇಲ್ಲವೆಂದೇ ನನ್ನ ಭಾವನೆ' ಎಂದರು.

`ಇಂಥದೊಂದು ಐತಿಹಾಸಿಕ ಸಾಹಿತ್ಯ ಸಂಭ್ರಮದ ಹುಟ್ಟಿಗೆ ಕರ್ನಾಟಕ ವಿಶ್ವವಿದ್ಯಾಲಯ ಸೂಲಗಿತ್ತಿಯಾಗಿ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮಗಳು ಕನಿಷ್ಠ ಎರಡು ವರ್ಷಗಳಿಗೊಮ್ಮೆ ನಡೆಯಬೇಕು' ಎಂದು ವಿ.ವಿ.ಯ ಸಭಾಂಗಣ ಹಾಗೂ ಅತಿಥಿ ಗೃಹಗಳನ್ನು ಉಚಿತವಾಗಿ ನೀಡಿದ ಕುಲಪತಿ ಡಾ. ಎಚ್.ಬಿ.ವಾಲೀಕಾರ ತಿಳಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ `ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್' ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ, `ಈ ಸಂಭ್ರಮವನ್ನು ಮೊದಲು ವಿರೋಧಿಸುತ್ತ ಬಂದವರಿಂದಲೇ ನಮ್ಮ ಕಾರ್ಯಕ್ರಮ ಯಶಸ್ವಿಯಾಯಿತು. ಪ್ರಚಾರದ ಅವಶ್ಯಕತೆಯೇ ಇಲ್ಲದಂತೆ ಮಾಡಿದ ವಿರೋಧಿಗಳು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಈ ಬಗ್ಗೆ ಅವರೇ ಪ್ರಚಾರ ಮಾಡಿದರು. ಇಂತಹ ಭಿನ್ನಾಭಿಪ್ರಾಯಗಳು ಇರಬೇಕಾದ್ದು ಅಗತ್ಯ. ಆದರೆ ಕೆಲವು ಸಾಹಿತಿಗಳಿಗೆ ಸಂಭ್ರಮದಲ್ಲಿ ಭಾಗವಹಿಸಬೇಡಿ ಎಂದು ನಿರಂತರವಾಗಿ ದೂರವಾಣಿ ಕರೆ ಮಾಡುತ್ತಿದ್ದರು. ಇಂತಹ ಕೆಡಿಸುವ ಮನಃಸ್ಥಿತಿ ಇರಬಾರದು' ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಕೆ.ಆರ್. ರಾಮಕೃಷ್ಣ ಅವರು ಮಾತನಾಡಿದರು. ಡಾ.ಹ.ವೆಂ. ಕಾಖಂಡಿಕಿ ಅವರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.