ADVERTISEMENT

ಸಮಿತಿ ರಚನೆಗೆ 13ರವರೆಗೆ ಅವಕಾಶ- ಕೆ.ಜಿ.ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:50 IST
Last Updated 10 ಫೆಬ್ರುವರಿ 2012, 19:50 IST

ಬೆಂಗಳೂರು: ಸದನ ಕಲಾಪ ನಡೆಯುವಾಗ ಅಶ್ಲೀಲ ದೃಶ್ಯಗಳನ್ನು ನೋಡಿದ ಪ್ರಕರಣದ ತನಿಖೆಗೆ ವಿಚಾರಣಾ ಸಮಿತಿಯನ್ನು ರಚಿಸಲು ಇದೇ 13ರವರೆಗೂ ಕಾಲಾವಕಾಶವಿದೆ ಎಂದು ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಶುಕ್ರವಾರ ತಿಳಿಸಿದರು.

`ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಕೃಷ್ಣಪಾಲೆಮಾರ್ ಅವರಿಗೆ ಇದೇ 8ರಂದು ನೋಟಿಸ್ ನೀಡಿದ್ದು, ಅದಕ್ಕೆ ಉತ್ತರಿಸಲು ಇದೇ 13ರಂದು ಬೆಳಿಗ್ಗೆ 10.30ರವರೆಗೂ ಅವಕಾಶವಿದೆ. ಸಮಿತಿ ರಚನೆಗೆ ಅಲ್ಲಿಯವರೆಗೂ ಕಾಯುತ್ತೇನೆ~ ಎಂದು ತಿಳಿಸಿದರು.

ಸಮಿತಿಗೆ ತಮ್ಮ ಪಕ್ಷದ ಕಡೆಯಿಂದ ಹೆಸರುಗಳನ್ನು ಸೂಚಿಸುವಂತೆ ಕಾಂಗ್ರೆಸ್, ಜೆಡಿಎಸ್‌ಗೆ ಪತ್ರ ಬರೆಯಲಾಗಿದೆ. ಬಿಜೆಪಿಯಿಂದ ನಾಲ್ಕು, ಕಾಂಗ್ರೆಸ್‌ನಿಂದ ಇಬ್ಬರು, ಜೆಡಿಎಸ್‌ನಿಂದ ಒಬ್ಬರು ಸಮಿತಿಯಲ್ಲಿರುತ್ತಾರೆ ಎಂದು ಸುದ್ದಿಗಾರರಿಗೆ ಹೇಳಿದರು.

ವಿಚಾರಣಾ ಸಮಿತಿಗೆ ಸಹಕರಿಸುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, `ಆ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಪ್ರತಿಪಕ್ಷಗಳು ಸಮಿತಿಗೆ ತಮ್ಮ ಪಕ್ಷದವರ ಹೆಸರುಗಳನ್ನು ಸೂಚಿಸುವ ವಿಶ್ವಾಸವಿದೆ. ಕಾದು ನೋಡೋಣ~ ಎಂದರು.

ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಚಿವರಿಬ್ಬರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿರುವ ದೃಶ್ಯಗಳು ದಾಖಲಾಗಿದ್ದರೂ, ತನಿಖೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದಾಗ, `ಕೊಲೆ ಮಾಡಿದ ವ್ಯಕ್ತಿ ನ್ಯಾಯಾಧೀಶರ ಮುಂದೆ ತಪ್ಪು ಒಪ್ಪಿಕೊಂಡರೂ, ಒಂದು ಅವಕಾಶವನ್ನು ನೀಡಲಾಗುತ್ತದೆ. ಒತ್ತಡಕ್ಕೆ ಮಣಿದು ಹೇಳಿಕೆ ನೀಡಿದ್ದೀರಾ ಎಂದು ಕೇಳುತ್ತಾರೆ. ಯಾವುದೇ ಪ್ರಕರಣವಾಗಲಿ, ಒಂದು ಅವಕಾಶವನ್ನು ನೀಡಬೇಕಾಗುತ್ತದೆ~ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

`ಕೆಲ ವಕೀಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವ ಕುರಿತು ಪರಿಶೀಲನೆ ನಡೆಸುತ್ತೇನೆ. ನಾನು ಮೂಲತಃ ವಕೀಲ, ಕೃಷಿಕ. ಇಂತಹ ಘಟನೆಗಳು ನಡೆದಾಗ ಸ್ವಾಭಾವಿಕವಾಗಿ ಮನಸ್ಸಿಗೆ ನೋವಾಗುತ್ತದೆ. ಆದರೆ ರಾಜೀನಾಮೆ ನೀಡಲು ಹೋಗಿರಲಿಲ್ಲ~ ಎಂದರು.

ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡುವುದು, ಎಚ್ಚರಿಕೆ ನೀಡುವುದು ಮತ್ತು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಅವರು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.