ADVERTISEMENT

`ಸಮುದಾಯ ಕೇಂದ್ರಿತ ಆಡಳಿತ ವ್ಯವಸ್ಥೆ ಇರಲಿ'

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಬೆಂಗಳೂರು: ದೇಶದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗುತ್ತಿಗೆದಾರ ಕೇಂದ್ರಿತ ಆಡಳಿತ ನಿರ್ವಹಣಾ ವ್ಯವಸ್ಥೆ ಇದೆ. ಅದನ್ನು ಸಮುದಾಯ ಕೇಂದ್ರಿತ ಆಡಳಿತ ವ್ಯವಸ್ಥೆಯನ್ನಾಗಿ ಬದಲಿಸಿದರೆ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ರಾಜಸ್ತಾನದ ಜಲತಜ್ಞ ರಾಜೇಂದ್ರ ಸಿಂಗ್ ಹೇಳಿದರು.

ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

`ಪಂಚಾಯಿತಿಗಳಲ್ಲಿ ಗುತ್ತಿಗೆದಾರರ ಆಣತಿಯಂತೆ ಎಲ್ಲವೂ ನಡೆಯುತ್ತಿದೆ. ಅದು ಬದಲಾಗಬೇಕು. ಸಮುದಾಯದ ಆಶಯದಂತೆ ಪಂಚಾಯಿತಿಗಳು ಕೆಲಸ ಮಾಡುವ ವ್ಯವಸ್ಥೆ ಬರಬೇಕು' ಎಂದರು.

ಅಭಿವೃದ್ಧಿ ಕಾಮಗಾರಿಗಳು, ನೀರಿನ ಪೂರೈಕೆ, ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆ ಎಲ್ಲವೂ ಕೆಲವೇ ವ್ಯಕ್ತಿಗಳ ಹಿತಾಸಕ್ತಿಗೆ ತಕ್ಕಂತೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮಸಭೆಗಳು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಬದ್ಧತೆ ತೋರಿಸಬೇಕು. ಜನರ ಅಗತ್ಯಗಳನ್ನು ಪೂರೈಸುವುದೇ ಪಂಚಾಯಿತಿಗಳ ಮೊದಲ ಆದ್ಯತೆ ಆಗಬೇಕು ಎಂದರು.

ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಮೂಲಸೌಕರ್ಯದ ಕೊರತೆ ಇರುವುದರಿಂದಲೇ ಜನರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಿಗೂ ಗುಣಮಟ್ಟದ ಮೂಲಸೌಕರ್ಯ, ಒಳ್ಳೆಯ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ನೀಡುವುದರಿಂದ ಮಾತ್ರ ನಗರೀಕರಣಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.