ADVERTISEMENT

ಸಯನೈಡ್‌ ಮೋಹನ್‌ಗೆ ಸಾಯುವ ತನಕ ಜೈಲು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಮೋಹನ್‌
ಮೋಹನ್‌   

ಬೆಂಗಳೂರು: ಬಂಟ್ವಾಳದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಗೆ ಸಯನೈಡ್‌ ತಿನ್ನಿಸಿ ಕೊಲೆ ಮಾಡಿದ ಆರೋಪದಡಿ ಕೆ.ಮೋಹನ್ ಕುಮಾರ್ ಅಲಿಯಾಸ್ ಸಯನೈಡ್‌ ಮೋಹನ್‌ಗೆ ದಕ್ಷಿಣ ಕನ್ನಡ ಜಿಲ್ಲಾ 4ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್‌ ಸಾಯುವವರೆಗೂ ಜೈಲು ವಾಸ ಅನುಭವಿಸುವಂತೆ ಶಿಕ್ಷೆ ಪರಿವರ್ತಿಸಿದೆ.

ವಿಚಾರಣಾ ನ್ಯಾಯಾಲಯದ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಆದೇಶ ನೀಡಿದೆ. ‘ಅಪರಾಧಿಗೆ ಕ್ಷಮಾದಾನ ನೀಡಬಾರದು’ ಎಂದೂ ನ್ಯಾಯಪೀಠ ಆದೇಶಿಸಿದೆ.

2009ರ ಜೂನ್‌ 18ರಂದು ಅನಿತಾ ಶವ ಹಾಸನದ ರಾಜ್ಯ ರಸ್ತೆ ಸಾರಿಗೆ ಬಸ್‌ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈಕೆ ಹಾಗೂ ಮೋಹನ್‌ ನಡುವಿನ ಫೋನ್‌ ಕಾಲ್‌ ಸಂಭಾಷಣೆ ಆಧಾರದಲ್ಲಿ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದರು.

ADVERTISEMENT

ಸಯನೈಡ್‌ ಮೋಹನ್‌ 2004ರಿಂದ 2009ರ ಅವಧಿಯಲ್ಲಿ ‘20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಸಯನೈಡ್‌ ತಿನ್ನಿಸಿ ಕೊಲೆಗೈದಿದ್ದಾನೆ’ ಎಂಬ ಆರೋಪವಿದೆ. ಬಂಟ್ವಾಳ ಮೂಲದ ಶಿಕ್ಷಕನಾದ ಈತ 2002ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ.

ಪ್ರಾಸಿಕ್ಯೂಷನ್‌ ಪರ ವಿಜಯಕುಮಾರ್ ಮಜಗೆ ವಾದ ಮಂಡಿಸಿದ್ದರು. ಮೋಹನ್‌ ಖುದ್ದು ವಾದ ಮಂಡಿಸಿದ್ದ.

ಮೋಹನ್‌ ವಿರುದ್ಧದ ಇನ್ನೂ ಎರಡು ಕೊಲೆ ಮತ್ತು ಅತ್ಯಾಚಾರ ಆರೋಪದ ಪ್ರಕರಣಗಳ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.