ADVERTISEMENT

ಸರ್ಕಾರದಲ್ಲಿ ಹೈಕಮಾಂಡ್ ಹಸ್ತಕ್ಷೇಪ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಮೈಸೂರು: `ನಮ್ಮ ಸರ್ಕಾರದ ಕಾರ್ಯಗಳಲ್ಲಿ ಪಕ್ಷದ ಹೈಕಮಾಂಡ್ ಹಸ್ತಕ್ಷೇಪ ಮಾಡುತ್ತಿಲ್ಲ. ಆ ರೀತಿ ಆಗಲೂ ನಾವು ಬಿಡುವುದಿಲ್ಲ~ ಎಂದು  ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುರುವಾರ ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರದ ವಿಷಯದಲ್ಲಿ ಹೈಕಮಾಂಡ್ ಹಸ್ತಕ್ಷೇಪವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಗುರುವಾರ ಸದಾನಂದಗೌಡರು ಹೈಕಮಾಂಡ್ ಹಸ್ತಕ್ಷೇಪವನ್ನು ಅಲ್ಲಗಳೆದರು.

ದಸರಾ ಮಹೋತ್ಸವದ ಉನ್ನತ ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡರು, `ರಾಜ್ಯ ಸರ್ಕಾರದಲ್ಲಿ ಎಲ್ಲ ಸಚಿವರು ಮತ್ತು  ಇಲಾಖೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. 29 ಇಲಾಖೆಗಳ ಪೈಕಿ 21 ಇಲಾಖೆಗಳ ಪರಿಶೀಲನೆ ನಡೆಸಲಾಗಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅಭಿವೃದ್ಧಿಯ ವೇಗಕ್ಕೆ ಚಾಲನೆ ನೀಡಿದ್ದೇನೆ ಎನ್ನುವ ಆತ್ಮ ವಿಶ್ವಾಸ ನನಗಿದೆ. ನನ್ನ ಮಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ~ ಎಂದರು.

ಶಾಸಕ ಬಿ.ಶ್ರೀರಾಮುಲು ಅವರ ರಾಜೀನಾಮೆ ಸ್ವೀಕಾರಕ್ಕೆ ಸ್ಪೀಕರ್ ವಿಳಂಬ ಮಾಡುತ್ತಿರುವ ಆರೋಪದ ಕುರಿತ ಪ್ರಶ್ನೆಗೆ  ಉತ್ತರಿಸಿದ ಅವರು, `ರಾಜೀನಾಮೆ ಕೊಟ್ಟವರು ಮತ್ತು ಸ್ವೀಕರಿಸಿದವರ ವಿಷಯ ಇದು. ನಾನು ಇದರಲ್ಲಿ ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.